ಭಾನುವಾರ, ನವೆಂಬರ್ 22, 2009

ರಾಜ್ಯಪಾಲರ ಕ್ರಿಯಾಶೀಲತೆ

ರಾಜ್ಯಪಾಲರೆ ಹುದ್ದೆ ಒಂದು ಬಿಳಿಯಾನೆ,ಅದರ ಅಗತ್ಯವೇ ಇಲ್ಲಾ,ಇಂಗ್ಲಿಷರು ಹಾಕಿಕೊಟ್ಟ ಸಂಪ್ರದಾಯವನ್ನು ಮುಂದುವರಿಸಬೇಕಿಲ್ಲ,ಇದನ್ನು ರದ್ದುಪಡಿಸಿ ಅಂತ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಈ ಹಿಂದೆ ಅದೆಷ್ಟೋ ಸಲ ಒತ್ತಾಯಿಸಿ ಈಗ ಸುಮ್ಮನಾಗಿಬಿಟ್ಟಿದ್ದಾರೆ.ರಾಷ್ಟ್ರಪತಿ ಹುದ್ದೆ ಬಿಟ್ಟರೆ ರಾಜ್ಯಪಾಲರ ಹುದ್ದೆಯೂ ಕೇವಲ ರಬ್ಬರ್ ಸ್ಟಾಂಪ್ ಎನ್ನುವ ಕಾಲವೂ ಇತ್ತು.
ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು,ಸರ್ಕಾರ ಕಳಿಸಿದ ಮಸೂದೆಗಳಿಗೆ ಸಹಿ ಹಾಕುವುದು ಬಿಟ್ಟರೆ ಬೇರೇನೂ ಕೆಲಸ ಇಲ್ಲಾ ಎನ್ನುವವರೂ ಇದ್ದಾರೆ.ಕರ್ನಾಟಕದಲ್ಲಿ ದೀರ್ಘಾವಧಿ ರಾಜ್ಯಪಾಲ ಖುರ್ಷೀದ್ ಅಲಂ ಖಾನ್ ಇಂತಹ ಆರೋಪಗಳನ್ನು ಸಮರ್ಥಿಸುವಂತೆ ಸುಮ್ಮನೆ ಇದ್ದು ಹೋಗಿದ್ದ್ದಾರೆ.ಸುಮಾರು ಒಂಬತ್ತು ವರ್ಷ ಕರ್ನಾಟಕದಲ್ಲಿ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರೂ ಕನ್ನಡದಲ್ಲಿ ಮಾತನಾಡುವುದು ಹೋಗಲಿ ಒಂದೇ ಒಂದು ಅಕ್ಷರವನ್ನೂ ಕಲಿಯದೇ ಕರ್ನಾಟಕದಲ್ಲಿ ಇದ್ದೂ ಇಲ್ಲದಂತೆ ತಮ್ಮ ಹುಟ್ಟೂರಿಗೆ ವಾಪಸಾಗಿದ್ದಾರೆ. ಖುರ್ಷೀದ್ ರಾಜ್ಯಪಾಲರಾಗಿ ಇದ್ದಾಗಲಂತೂ ಕನ್ನಡಿಗರು ರಾಜ್ಯಪಾಲರ ಹುದ್ದೆ ಎಂದರೆ ಮುಖ್ಯಮಂತ್ರಿ ಮತ್ತು ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸುವ ಯಂತ್ರ ಎಂದೇ ತಪ್ಪಾಗಿ ತಿಳಿದಿರುವ ಸಾಧ್ಯತೆ ಇದೆ. ಇಂಗ್ಲಿಷ್ನಲ್ಲಿ ಬರೆದು ಕೊಟ್ಟ ಕನ್ನಡ ವಾಕ್ಯವನ್ನೂ ಸರಿಯಾಗಿ ಓದುವ ಅಭ್ಯಾಸ ಮಾಡಿಕೊಳ್ಳದೆ ಪ್ರಮಾಣ ವಚನ ಬೋಧನೆ ಸಂದರ್ಭದಲ್ಲಿ,"ಎಂಬಹೆ -ಸರಿನವ -ನಾದನಾ -ನು " ಎಂದು ಓದುತ್ತಾ ನಗೆಪಾಟಲಿಗೆ ಈಡಾಗುತ್ತಿದ್ದರು.
ರಾಜ್ಯದ ಮೊಟ್ಟ ಮೊದಲ ಮಹಿಳಾ ರಾಜ್ಯಪಾಲರಾದ ರಮಾದೇವಿ ಅವರು ತೆಲುಗಿನವರಾದ ಕಾರಣ ಬಹು ಪಾಲು ಒಂದೇ ರೀತಿಯ ಲಿಪಿ ಇದ್ದುದರಿಂದ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡಿಗರಿಗೆ ಖುಷಿ ಉಂಟು ಮಾಡಿದ್ದರು. ಆದರೆ ರಾಜ್ಯಪಾಲರಿಗಿಂತ ಜನ ಪ್ರತಿನಿಧಿಗಳಿಗೆ ಹೆಚ್ಚಿನ ಅಧಿಕಾರ ಎನ್ನುವ ಸಾಂವಿಧಾನಿಕ ಮಾತಿಗೆ ಮನ್ನಣೆ ನೀಡುವಂತೆ ಕೇವಲ ಚುರುಕಾಗಿ ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಲ್ಲುತ್ತಿದ್ದರೆ ಹೊರತು ರಾಜ್ಯಪಾಲರಾಗಿ ಗಮನ ಸೆಳೆದದ್ದು ಅಷ್ಟರಲ್ಲೇ ಇದೆ. ನಿವೃತ್ತ   IAS ಅಧಿಕಾರಿ ಚತುರ್ವೇದಿ ಅವರಂತೂ ಮಳೆ ನೀರು ಕೊಯ್ಲಿಗೆ ಮಾರು ಹೋಗಿ ರಾಜಭವನದಲ್ಲಿ ಅದನ್ನು ಕಾರ್ಯ ರೂಪಕ್ಕೆ ತಂದರು.ತಮ್ಮ ಅಧಿಕಾರಾವಧಿಯಲ್ಲಿ ತುಂಬಾ ಸಭ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ಹ್ ಅವರಿಗೆ  ಕುಮಾರಸ್ವಾಮಿ ಕೈ ಕೊಟ್ಟ ನಂತರ ಬಹುಮತ ಸಾಬೀತಿಗೆ ಹೆಚ್ಚಿನ ಕಾಲಾವಕಾಶ ನೀಡಿ ತಮ್ಮ ನೇಮಕ ಮಾಡಿದ್ದ ಕೇಂದ್ರದ ಬಿಜೆಪಿ ನಾಯಕರಿಂದಲೇ ಟೀಕೆಗೆ ಒಳಗಾಗಿದ್ದರು.
ಕಳೆದ ಎಂಟು ಹತ್ತು ವರ್ಷಗಳನ್ನು ಬಿಟ್ಟರೆ ಹಿಂದಿನ ಬಹುತೇಕ ರಾಜ್ಯಪಾಲರು ತಮ್ಮನ್ನು ನೇಮಕ ಮಾಡಿದ ಆಡಳಿತರೂಢ ಪಕ್ಷದ ಸೇವಕರಂತೆ ಕಾರ್ಯ ನಿರ್ವಹಿಸುತ್ತಿದ್ದರು.ಕೇಂದ್ರ ಸರ್ಕಾರ ಬಯಸಿದರೆ ರಾಜ್ಯ ಸರ್ಕಾರದ ವಜಾಕ್ಕೆ ಶಿಫಾರಸು ಮಾಡುವ ಅಡಿಯಾಳಿನಂತೆ ಸೊಂಟ ಬಗ್ಗಿಸಿ ನಿಲ್ಲುತ್ತಿದ್ದರು. ಹೀಗಾಗಿ ಎಸ್ಟೋ ಸಲ ರಾಜ್ಯಪಾಲರ ಕರ್ತವ್ಯ ಎಂದರೆ ಸರ್ಕಾರ ವಜಾಕ್ಕೆ ಶಿಫಾರಸು ಮಾಡುವುದಷ್ಟೇ ಎಂದೂ ಭಾವಿಸಿದವರಿದ್ದಾರೆ.
ಎಚ್.ಆರ್.ಭಾರದ್ವಾಜ್ ಉಳಿದವರಿಗಿಂತ ಭಿನ್ನರಾಗಿ ಕಾಣುತ್ತಿದ್ದಾರೆ.ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ನಿಷ್ಪ್ರಯೋಜಕರಂತೆ ಕಾಣುತ್ತಿದ್ದ ಭಾರದ್ವಾಜ್ ಕರ್ನಾಟಕದ ರಾಜ್ಯಪಾಲರಾದ ನಂತರ ಕ್ರಿಯಾಶೀಲತೆ ಮೆರೆಯುವ ಹಾದಿಯಲ್ಲಿ ಸಾಗುವಂತೆ ಕಾಣುತ್ತಿದ್ದಾರೆ. ಕೇವಲ ಸಹಿ ಹಾಕುವ ಅಥವಾ ಸರ್ಕಾರಕ್ಕೆ ಪ್ರಮಾಣ ವಚನ ಬೋಧಿಸುವುದಷ್ಟೇ  ತನ್ನ ಕೆಲಸವಲ್ಲ ಎಂದು ಸಾಬೀತುಪಡಿಸುತ್ತಿದ್ದಾರೆ.ರಾಜ್ಯಪಾಲರ ಬಳಿ ಅಂಕುಶವೂ ಇದೆ,ಚಾಟಿಯೂ ಇದೆ ಎಂಬುದನ್ನು ತೋರಿಸುತ್ತಿದ್ದಾರೆ.ಚರ್ಚುಗಳ ಮೇಲಿನ ದಾಳಿ ,ಪಬ್ಬುಗಳಿಗೆ ಯುವತಿಯರು ಹೋದಾಗ ಶ್ರೀರಾಮಸೇನೆ ಎಂಬ ಹೆಸರಿನ  ವಾನರ ಸೇನೆ ಹಲ್ಲೆ ನಡೆಸಿದಾಗ ಭಾರದ್ವಾಜ್ "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಎಚ್ಚರಿಕೆ ನೀಡಿದರು,ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಚುರುಕಾಗಿ ನಡೆಸುವಂತೆ ಗುಡುಗಿದರು.ಗಣಿ ದಣಿಗಳು ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಾಗ,"ನಾನೇನೂ ಸುಮ್ಮನೆ ಕುಳಿತಿಲ್ಲ,ಅಗತ್ಯ ಕಂಡು ಬಂದರೆ ಸಾಂವಿಧಾನಿಕ ಅಧಿಕಾರ ಚಲಾಯಿಸುವುದಾಗಿಯೂ ಬಿಸಿ ಮುಟ್ಟಿಸಿದರು.
ಭಾರದ್ವಾಜ್ ವಿಭಿನ್ನ ಮಾದರಿಯ ರಾಜ್ಯಪಾಲರಂತೆ ಕಾಣುತ್ತಿದ್ದಾರೆ.ಪ್ರಜಾಸತ್ತೆಯ ಆಶಯಗಳಿಗೆ ಅಡ್ಡಿ ಉಂಟು ಮಾಡದೆ ಸರ್ಕಾರ ಕುರುಡು ಗೂಳಿಯಂತೆ ಮುನ್ನುಗ್ಗದೆ ನಿಜಕ್ಕೂ ಜನಪರ ಸರ್ಕಾರವಾಗಲು ಭಾರದ್ವಾಜ್ ಪ್ರೇರಣೆ ನೀಡಲಿ.ಶೇಷನ್,ಲಿಂಗ್ದೊಗಳು ಚುನಾವಣಾ ಆಯೋಗದ ಅಸ್ತಿತ್ವ ಪ್ರದರ್ಶಿಸಿ ಕ್ರಿಯಾಶೀಲರಾದಂತೆ,ರಾಜ್ಯಪಾಲರ ಹುದ್ದೆಗೂ ಘನತೆ ,ಗೌರವ ತಂದು ಕೊಡಲಿ. 

ಭಾನುವಾರ, ನವೆಂಬರ್ 15, 2009

ಓರ್ವ "ನಾಯಕ" ದುರ್ಬಲನಾಗುತ್ತ ಪತನಗೊಳ್ಳುವ ಬಗೆ

ಕರ್ಣಾಟಕದ ರಾಜಕೀಯ ಇತಿಹಾಸದಲ್ಲಿ ನಾಯಕನೊಬ್ಬ ದುರ್ಬಲನಾಗುತ್ತ ಸಾಗುವ ರೀತಿಗೆ ಯಡಿಯೂರಪ್ಪ ಅವರಿಗಿಂತ ಉತ್ತಮ ಉದಾಹರಣೆ ಇನ್ನೊಂದಿರಲಾರದು.ಅಧಿಕಾರಕ್ಕಾಗಿ ಹಸಿದಿದ್ದ ಪಕ್ಷ ಮತ್ತು ಅದರ ನಾಯಕ ಹೇಗೆ ಪತನದ ಹಾದಿ ಹಿಡಿಯಬಹುದೆನ್ನುವುದನ್ನೂ ರಾಜ್ಯ ರಾಜಕೀಯದ ಇತ್ತೀಚಿನ ಬೆಳವಣಿಗೆಗಳು ತೋರಿಸುತ್ತವೆ.
ಹಾಗೆ ನೋಡಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾಲವೂ  ಪಕ್ವವಾಗಿರಲಿಲ್ಲ.ಬಸವಣ್ಣ,ಶಿಶುನಾಳ ಶರೀಫಾ,ಯೋಗಿ ನಾರಾಯಣ,ಲಂಕೇಶರಂಥವರು ಹುಟ್ಟಿದ ಕನ್ನಡ ನಾಡಿನಲ್ಲಿ ಬಿಜೆಪಿ ತನ್ನ ತತ್ವಗಳಿಂದಲೇ ಅಧಿಕಾರಕ್ಕೆ ಬರುವಷ್ಟು ಶಕ್ತಿಶಾಲಿಯಾಗಿ ಬೆಳೆದಿರಲಿಲ್ಲ.ಇಂಥ ಮಹಾನುಭಾವರು ಬೋಧಿಸಿದ ಜಾತ್ಯತೀತ,ಧರ್ಮ ಸಮನ್ವಯ,ಮಾನವೀಯತೆಯೇ ಅಂತಿಮ ಸತ್ಯವೆಂಬ ವಿಚಾರಗಳ ಎದುರು ಸಾಮರಸ್ಯ ಕದಡುವ ,ಅಮಾನವೀಯ,ಕೈಕಾಲುಗಳಿಲ್ಲದ ತರ್ಕಹೀನ ವಿಚಾರಗಳಿಗೆ ಕರ್ಣಾಟಕದ ಅಂತರಾತ್ಮವನ್ನು ಕದಡುವ ಶಕ್ತಿಯೇ ಇರಲಿಲ್ಲ.ಪುರೋಹಿತಶಾಹಿ ಮನಸ್ಸು   ಅನಗತ್ಯವಾಗಿ ಸೃಷ್ಟಿಸಿದ ಬಾಬಾ ಬುಡನಗಿರಿ ವಿವಾದ, ಹುಬ್ಬಳ್ಳಿ ಈದ್ಗಾ ಗದ್ದಲದ ಜತೆ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ  ಎಸ್.ಎಂ.ಕೃಷ್ಣ,ಎಚ್.ಡಿ.ಕುಮಾರಸ್ವಾಮಿ,ಜೆಡಿಎಸ್ ವರಿಷ್ಠ ದೇವೇಗೌಡರೂ ಬಿಜೆಪಿ ಅಧಿಕಾರಕ್ಕೆ ಬರಲು ನೆರವಾಗಿದ್ದಾರೆ.
ಈ ನೆಲದ ಜನರ ನಡುವೆ ಪರಸ್ಪರ ಸಂಶಯ ಹುಟ್ಟಿಸುವ ಜಾತಿ,ಧರ್ಮಗಳ ವಿಷ ಬೀಜ ಬಿತ್ತಿದ ಮಡಿ ಮೈಲಿಗೆಯ ಮಾತನಾಡುವ ರೋಗಗ್ರಸ್ಥ ,ಕ್ಷುದ್ರ ಮನಸುಗಳು ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಮುಂದಾಗಿ ನಾಡಿನ ಹಿತವನ್ನು ಮರೆತರು.ಜಾತಿ,ಧರ್ಮ,ದೇವರು ದಿಂಡರುಗಳೇ ಜನರ ಬದುಕಿನ ಮಾರ್ಗವನ್ನು ತೋರಿಸುವ ಪುರೋಹಿತಶಾಹಿಗಳ ಪರೋಕ್ಷ ಹಿಡಿತದಲ್ಲಿರುವ ಈ ದೇಶದಲ್ಲಿ ಸಮೂಹ ಸನ್ನಿಗೆ ಒಳಪಡಿಸುವ ಚಿಲ್ಲರೆ ಸಂಗತಿಗಳೇ ಸದೃಢವಾಗಿ ಬೆಳೆಯತೊಡಗಿದವು.ಇಷ್ಟಾದರೂ ಈ ಕೊಳಕು ಪ್ರಯತ್ನಗಳಿಗೆ ಕರುನಾಡಿನಲ್ಲಿ ಸುಭದ್ರ ಅಡಿಪಾಯವೇನೂ ಇರಲಿಲ್ಲ.ಅಯೋಧ್ಯೆ,ಶ್ರೀರಾಮಚಂದ್ರ,ರಾಮಜ್ಯೋತಿ,ರಥ ಯಾತ್ರೆ,ಇಟ್ಟಿಗೆ ವಿಚಾರಗಳೂ ಕನ್ನಡ ನಾಡಿನ ಮಲ್ಲಿಗೆ ಮನಸ್ಸಿನ ಸಿರಿಗಂಧದ ವಾತಾವರಣವನ್ನು  ಮಲಿನ ಮಾಡುತ್ತಾ ಬಂದವೇ ಹೊರತು ಇಡೀ ನಾಡನ್ನು ವ್ಯಾಪಿಸುವಲ್ಲಿ ಯಶಸ್ಸು ಗಳಿಸಲಿಲ್ಲ.
ಎಂಥ ಬೊಬ್ಬೆಗೂ ಶರಣಾಗದ ಕನ್ನಡಿಗರ ನಿಲುವಿನಿಂದ ಹತಾಶ ಸ್ಥಿತಿ ತಲುಪಿದ್ದ ಬಿಜೆಪಿ ನೆರವಿಗೆ ಕೃಷ್ಣ,ಕುಮಾರಸ್ವಾಮಿ,ದೇವೇಗೌಡ ಪರೋಕ್ಷವಾಗಿ ನೆರವಾದರು.ಕೃಷ್ಣ ಮುಖ್ಯ ಮಂತ್ರಿಯಾಗಿದ್ದಾಗ ಲಿಂಗಾಯತ ಸಮುದಾಯದ ಪ್ರಮುಖ ನಾಯಕರನ್ನು ಮೂಲೆಗುಂಪು ಮಾಡಿದ್ದು,ವೀರೇಂದ್ರ ಪಾಟೀಲ್ ಎರಡನೇ ಸಲ ಮುಖ್ಯಮಂತ್ರಿಯಾದಾಗ ಅವರನ್ನು ಕನಿಷ್ಠ ಸೌಜನ್ಯವೂ ಇಲ್ಲದೆ ಅಧಿಕಾರದಿಂದ (ಅವರಿಗೆ ಆರೋಗ್ಯ ಸರಿ ಇರಲಿಲ್ಲ ಎಂಬ ಸಕಾರಣ ಇದ್ದರೂ)ಇಳಿಸಿದ್ದು, ವೀರೇಂದ್ರ ಪಾಟೀಲ್ ನಂತರ ರಾಜಶೇಖರ ಮೂರ್ತಿ ಮುಖ್ಯಮಂತ್ರಿ ಆಗಬಹುದೆಂಬ ಲಿಂಗಾಯತ ಸಮುದಾಯದ ನಿರೀಕ್ಷೆ ಹುಸಿಯಾಗಿದ್ದು ಕಾಂಗ್ರೆಸ್ ವಿರುದ್ಧ ಲಿಂಗಾಯತರು ತಿರುಗಿ ಬೀಳುವುದಕ್ಕೆ ಕಾರಣವಾಯಿತು.
ದೇವೇಗೌಡರ ನೇತೃತ್ವದ ಜೆಡಿಎಸ್ ನಿಲುವುಗಳು ಇದಕ್ಕಿಂತ ಭಿನ್ನವಾಗಿರಲಿಲ್ಲ.ದೇವೇಗೌಡರ ಪ್ರಬಲ ಒಕ್ಕಲಿಗ ಜಾತಿ ಕಾರಣದಿಂದಾಗಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಪ್ರಬಲವಾಗಿದ್ದರೂ ಲಿಂಗಾಯತರ ಪ್ರಭಾವ ಇರುವ ಉತ್ತರ ಕರ್ನಾಟಕದಲ್ಲೂ ಒಂದಷ್ಟು ಶಕ್ತಿ ಹೊಂದಿತ್ತು.ತಮ್ಮ ಪಕ್ಷದ ಹೆಸರಿನ ಜತೆ ಇರುವ "ಜಾತ್ಯತೀತ" ಎಂಬ ಪದದ ಅರ್ಥಕ್ಕೆ ವಿರುದ್ಧವಾಗಿ ಬಹುತೇಕ ಸಲ ನಡೆದುಕೊಂಡಿರುವ ದೇವೇಗೌಡರು ಕೂಡ ತಾವು ಮತ್ತು ತಮ್ಮ ಮಕ್ಕಳ ಅನುಕೂಲಕ್ಕಾಗಿ ತೆಗೆದುಕೊಂಡ ನಿಲುವುಗಳೂ ಅವರಿಗೆ ಗೊತ್ತಿಲ್ಲದಂತೆ ಬಿಜೆಪಿಗೆ ನೆರವಾಗಿವೆ.ಪಕ್ಷದ ಹೆಸರಿಗೆ ತಕ್ಕಂತೆ ಜಾತ್ಯತೀತವಾಗಿ,ಸದೃಢವಾಗಿ ಬೆಳೆಸಬಹುದಾಗಿದ್ದ ಅವಕಾಶವನ್ನೂ ದೇವೇಗೌಡ ಮತ್ತು ಕುಮಾರಸ್ವಾಮಿ ಹಾಳು ಮಾಡಿದ್ದೂ ಬಿಜೆಪಿಗೆ ರಾಜ್ಯದಲ್ಲಿ ಭವಿಷ್ಯ ರೂಪಿಸಲು ಸಹಕರಿಸಿತು.ಕಾಂಗ್ರೆಸ್ ಜತೆಗೂಡಿ ಮೈತ್ರಿ ಸರ್ಕಾರ ರಚಿಸಿದಾಗ ಪಕ್ಷದಲ್ಲಿದ್ದ ಹಿರಿಯ ನಾಯಕ ಸಿದ್ದರಾಮಯ್ಯ ಅವರನ್ನು ನಿಜಕ್ಕೂ ಮುಖ್ಯಮಂತ್ರಿ ಮಾಡುವ ಎಲ್ಲ ಅವಕಾಶಗಳಿದ್ದರೂ ಅವರನ್ನು ಉಪಮುಖ್ಯಮಂತ್ರಿ ಮಾಡಿ ವಂಚಿಸಿದ್ದು ಕುರುಬ ಸಮುದಾಯದ ಸಿಟ್ಟಿಗೆ ಕಾರಣವಾಯಿತು.ಪಕ್ಷದಲ್ಲಿದ್ದ ವಿವಿಧ ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ನಾಯಕರನ್ನು ಪ್ರಜಾಸತ್ತಾತ್ಮಕವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಕ್ಕಳ ಹಿತಾಸಕ್ತಿಗಾಗಿ ದೇವೇಗೌಡರು ತೆಗೆದುಕೊಂಡ ಏಕಪಕ್ಷೀಯ ತೀರ್ಮಾನಗಳು ಈ ಎಲ್ಲ ಸಮುದಾಯಗಳು ದೇವೇಗೌಡರಿಂದ ದೂರ ಸರಿಯುವಂತೆ ಮಾಡಿದವು.ಸಿದ್ದರಾಮಯ್ಯ ತೆರವು ಮಾಡಿದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಲಿಂಗಾಯತರಾದ ಎಂ.ಪಿ.ಪ್ರಕಾಶ್ ಅವರನ್ನು ದೇವೇಗೌಡರು ತಂದರಾದರೂ ಆನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಪ್ರಕಾಶ್ ಉಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡು ಕೇವಲ ಮಂತ್ರಿಯಾದರು.ಆನಂತರ ಜೆಡಿಎಸ್ ನಲ್ಲಿ ಇರಲಾಗದೆ ಕಾಂಗ್ರೆಸ್ ಪಕ್ಷ ಸೇರಿದರು.ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಒಪ್ಪಂದದ ಪ್ರಕಾರ ಇಪ್ಪತ್ತು ತಿಂಗಳ ನಂತರ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡದೆ ವಂಚಿಸಿದ್ದು ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಲಿಂಗಾಯತ ಸಮುದಾಯ ಒಗ್ಗೂಡಿ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರೇ ಆಗಬೇಕೆಂಬ ನಿರ್ಧಾರ ಕೈಗೊಳ್ಳುವಂತಾಯಿತು.ಆ ಹೊತ್ತಿಗೆ ಇತರ ಪಕ್ಷಗಳಲ್ಲಿದ್ದ ಲಿಂಗಾಯತ ನಾಯಕರನ್ನು ದೇವೇಗೌಡ,ಕೃಷ್ಣ ಮೂಲೆಗುಂಪು ಮಾಡಿದ್ದರು.ಈ ಮೂಲಕ ಜೆಡಿಎಸ್ ಲಿಂಗಾಯತರು,ಕುರುಬರು,ದಲಿತರು,ಅಲ್ಪಸಂಖ್ಯಾತರು ಮತ್ತು ಹಿಂದುಳಿದ ಜಾತಿಗಳ ಬಹುತೇಕ ಬೆಂಬಲವನ್ನೂ ಕಳೆದುಕೊಂಡಿತು .ದೇವೇಗೌಡರ ಕೇವಲ ಕುಟುಂಬ ರಾಜಕಾರಣಕ್ಕಾಗಿ  ಎಷ್ಟೋ ಸಲ ತೆಗೆದುಕೊಂಡ ತೀರ್ಮಾನಗಳು ಒಕ್ಕಲಿಗ ಪ್ರಮುಖರನ್ನೂ ಇತರ ಪಕ್ಷಗಳಿಗೆ ವಲಸೆ ಹೋಗುವಂತೆ ಮಾಡಿತ್ತು. ಹೀಗೆ ಕಾಂಗ್ರೆಸ್,ಜೆಡಿಎಸ್,ದೇವೇಗೌಡ,ಕುಮಾರಸ್ವಾಮಿ,ಕೃಷ್ಣ ಮಾಡಿದ ತಪ್ಪುಗಳು ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕೆಂಬ ಬಿಜೆಪಿ ಕನಸಿಗೆ ರತ್ನಗಂಬಳಿ ಹಾಸಿ ಜೀವ ತುಂಬಿದವು.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಈ ಅಂಶಗಳು ಕಾರಣವಾದವು.ಬಿಜೆಪಿ ಸರ್ಕಾರ ಬರಬೇಕೆಂಬ ಒಲವಿಗಿಂತ ವಂಚನೆಗೊಳಗಾದ ಯಡಿಯೂರಪ್ಪ ಮುಖ್ಯಮಂತ್ರಿ ಆಗಲೇಬೇಕೆಂಬ ಮತದಾರರ ನಿಲುವು ಬಿಜೆಪಿಗೆ ವಾರವಾಯಿತು.ಈ ನಿರ್ಧಾರದಲ್ಲಿ ಪ್ರಬಲ ಲಿಂಗಾಯತ ಸಮುದಾಯದ ಜತೆ ಯಡಿಯೂರಪ್ಪನವರಿಗಾದ  ಅನ್ಯಾಯದ ವಿರುದ್ಧ ಇತರ ಜಾತಿ,ಸಮುದಾಯಗಳಿಗೆ ಸೇರಿದ ಜನರೂ ಕೈ ಜೋಡಿಸಿದರು.
ಈ ರೀತಿ ಮುಖ್ಯಮಂತ್ರಿಯಾಗುವ ಅದೃಷ್ಟ ಗಿಟ್ಟಿಸಿದ ಯಡಿಯೂರಪ್ಪ ಬಗ್ಗೆ ಕನ್ನಡಿಗರು ಅಪಾರ ನಿರೀಕ್ಷೆ ಇರಿಸಿಕೊಂಡಿದ್ದರು.ಪ್ರಬಲ ಲಿಂಗಾಯತ ಸಮುದಾಯ ಸಹಜವಾಗಿಯೇ ಯಡಿಯೂರಪ್ಪನವರ ಬೆನ್ನ ಹಿಂದೆ ನಿಂತಿತ್ತು.ರಾಜಕೀಯ,ತಾತ್ವಿಕ  ಕಾರಣಗಳು ಬಿಟ್ಟರೆ ಉಳಿದ ಸಮುದಾಯಗಳಿಂದಲೂ ಯಡಿಯೂರಪ್ಪನವರಿಗೆ ಉಳಿದ ಸಮುದಾಯಗಳ ಬೆಂಬಲವೂ ಇತ್ತು.ಸರಳ ಬಹುಮತಕ್ಕೆ ಬೆರಳೆಣಿಕೆ ಸಂಖ್ಯೆಯ ಶಾಸಕರ ಕೊರತೆ ಇತ್ತಾದರೂ ಸರ್ಕಾರ ರಚನೆಗೆ ಅದೇ ಅನಿವಾರ್ಯವಾಗಿರಲಿಲ್ಲ.ಏಕೈಕ ಬಲಿಷ್ಟ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಬುಡ ಅಲ್ಲಾಡಿಸಲು ಕಾಂಗ್ರೆಸ್ ಆಥವಾ ಜೆಡಿಎಸ್ ಮುಂದಾಗಿದ್ದರೂ ಈ ಪಕ್ಷಗಳಿಗೆ ಜನತೆ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದರು.ಇಂಥ ಸಂದರ್ಭದಲ್ಲೇ ನಾಯಕನಾದವನು ತೆಗೆದುಕೊಳ್ಳುವ ತೀರ್ಮಾನದ ಕಡೆ ಎಲ್ಲರ ಗಮನ ನೆಟ್ಟಿರುತ್ತದೆ.ಕೇಂದ್ರದಲ್ಲಿ ೧೯೮೯  ರಿಂದ ೧೯೯೪ ರವರೆಗೆ   ಸರಳ ಬಹುಮತವಿಲ್ಲದೆ ಕಾಂಗ್ರೆಸ್ ಸರ್ಕಾರ ಮುನ್ನಡೆಸಿದ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಉದಾಹರಣೆಯೂ ನಮ್ಮೆದುರಿದೆ.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಪರ ವಾತಾವರಣ ಇದ್ದಾಗ ಪಕ್ಷೇತರ ಶಾಸಕರು ಸಹಜವಾಗಿಯೇ ಅದರತ್ತ ಮುಖ ಮಾಡುತ್ತಾರೆ.ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪಕ್ಷೇತರರ ಬೆಂಬಲ ಪಡೆದುಕೊಂಡು ಸರ್ಕಾರ ರಚಿಸುವ ಕನಸನ್ನೂ ಕಂಡಿರಬಹುದು,ಅದಕ್ಕ್ಕಾಗಿ ಕೆಲವರು  ಪ್ರಯತ್ನಗಳನ್ನೂ ನಡೆಸಿರಬಹುದು.ಈ ಕಾರಣದಿಂದಲೇ ಪಕ್ಷೇತರ ಶಾಸಕರು ಅತ್ತಿಂದಿತ್ತ ಓಡಾಡಿರಬಹುದು.ಆದರೆ ಧರ್ಮಸಿಂಗ್ ನೇತೃತ್ವದ ಮೈತ್ರಿ ಸರ್ಕಾರಕ್ಕೆ  ಕೈ ಕೊಟ್ಟಿದ್ದ ಜೆಡಿಎಸ್ ಜತೆ ಕೆಲವೇ ತಿಂಗಳಲ್ಲಿ ಕೈಜೋಡಿಸಲು ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಖಂಡಿತಾ ಮುಂದಾಗುತ್ತಿರಲಿಲ್ಲ.ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಇಲ್ಲಾ,ಶತ್ರುಗಳೂ ಇಲ್ಲಾ ಎಂಬ ಮಾತೇನೋ ಚಾಲ್ತಿಯಲ್ಲಿದೆ.ಆದರೆ ಅದೇ ಸಾರ್ವಕಾಲಿಕ ಸತ್ಯವೇನೂ ಅಲ್ಲ. ಆಗಲೇ ನಿಜವಾದ ನಾಯಕನ ಶಕ್ತಿ ಏನೆಂದು ಬಯಲಾಗುತ್ತದೆ.ಯಡಿಯೂರಪ್ಪನವರು ಪಕ್ಷೇತರ ಶಾಸಕರ ಮನವೊಲಿಸಿ ತಮ್ಮ ನೇತೃತ್ವದ ಸರ್ಕಾರ ರಚನೆಯ ಅನಿವಾರ್ಯತೆ ಮತ್ತು ಅಗತ್ಯವನ್ನು ಮನದಟ್ಟು ಮಾಡಿ ಕೊಡಬೇಕಿತ್ತೆ ಹೊರತು ಎಲ್ಲ ಪಕ್ಷೇತರ ಶಾಸಕರಿಗೆ ಮಂತ್ರಿಗಳಾಗಿಸುವ ಆಮಿಷ ಒಡ್ಡಬಾರದಿತ್ತು.  ಹಾಗೊಂದು ವೇಳೆ ಪಕ್ಷೇತರರು ಕಾಂಗ್ರೆಸ್ ಮತ್ತು ಜೆಡಿಎಸ್ ನತ್ತ ಓಡಿದ್ದರೂ ಅವರೆಲ್ಲ ಸೇರಿ ಸರ್ಕಾರ ರಚಿಸುವುದು ಸಾಧ್ಯವೇ ಇರಲಿಲ್ಲ.ಅಕಸ್ಮಾತ್ ಕಿಚಡಿ ಸರ್ಕಾರ ರಚನೆಯಾಗಿದ್ದರೂ ಅದು ರಾಜ್ಯ ರಾಜಕೀಯ ಇತಿಹಾಸದ ಅತ್ಯಂತ ಅಲ್ಪಾಯುಶಿ ಸರ್ಕಾರವೆಂದು ಇತಿಹಾಸದಲ್ಲಿ ದಾಖಲಾಗುತ್ತಿತ್ತು.ಅಧಿಕಾರಕ್ಕಾಗಿ ತಹತಹಿಸುತ್ತಿದ್ದ ಬಿಜೆಪಿ ಮತ್ತು ಯಡಿಯೂರಪ್ಪನವರ ಆಗಿನ ಮನೋ ಸ್ಥಿತಿಗೆ ಕಾಯುವ ಸಹನೆ ಇರಲಿಲ್ಲವಾದರೂ ಆಗ ದೂರದೃಷ್ಟಿಯ ಸಹನೆ ತೋರಿದ್ದರೆ ಅದರ ಪ್ರತಿಫಲ ಏನೆನ್ನುವುದು ಈಗ ಗೊತ್ತಾಗುತ್ತಿತ್ತು.ಎಲ್ಲ ಪಕ್ಷೇತರರಿಗೆ ಮಣೆ ಹಾಕುವ ತಪ್ಪು ಮಾಡಿದಾಗಲೇ  ತಮ್ಮ ಪತನಕ್ಕೆ ಯಡಿಯೂರಪ್ಪ ಸ್ವತಹ ಅ ಡಿಪಾಯ ಹಾಕಿಕೊಂಡರು. ಸರ್ಕಾರ ರಚಿಸುವ ಸಲುವಾಗಿ ಯಡಿಯೂರಪ್ಪ ಎಲ್ಲ ಪಕ್ಷೆತರರಿಗೆ ಮಣೆ ಹಾಕುವುದು ಅನಿವಾರ್ಯವಾಗಿತ್ತ್ತೆಂದೇ ಇಟ್ಟುಕೊಳ್ಳೋಣ.ಆದರೆ ಒಂದೇ ಸಂಪುಟದಲ್ಲಿ ಕರುಣಾಕರ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಎಂಬ ಸಹೋದರರಿಗೆ ಅವಕಾಶ ನೀಡುವ ತಪ್ಪು ಮಾಡಬಾರದಿತ್ತು.ಚುನಾವಣೆ ಸಂದರ್ಭದಲ್ಲೇ ಟಿಕೆಟ್ ನೀಡುವಾಗ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರಿಗೆ ಮನ್ನಣೆ ನೀಡುವ ಬದಲು ಟಿಕೆಟ್ ಗಳನ್ನೂ ಕೊಟ್ಯಂತರ ರೂಪಾಯಿಗಳಿಗೆ ಗಣಿ ಕಳ್ಳರಿಗೆ,ಭೂಗಳ್ಳರಿಗೆ ಮಾರಾಟ ಮಾಡಿದ ಫಲವಾಗಿ ಪಕ್ಷ ನಿಷ್ಠೆಗಿಂತ ವ್ಯಾಪಾರಿ ಕಾರಣಗಳಿಗಾಗಿ ಪಕ್ಷಕ್ಕೆ ಸೇರ್ಪಡೆಯಾದವರು ಸಹಜವಾಗಿಯೇ ಪ್ರತಿಫಲ ನಿರೀಕ್ಷಿಸಿದರು.ಶಿಸ್ತು ಮತ್ತು ಪ್ರಾಮಾಣಿಕ ರಾಜಕಾರಣದ ಮಾತನಾಡುವ ಬಿಜೆಪಿಗೆ ಅಧಿಕಾರ ವ್ಯಾಮೋಹ ಬಿಟ್ಟರೆ ಇಂಥ ವ್ಯಾಪಾರದ ಅನಿವಾರ್ಯತೆ ಏನೂ ಇರಲಿಲ್ಲ.ಮಂತ್ರಿಗಳ ಆಯ್ಕೆಯಲ್ಲಿ ಇತರ ಪಕ್ಷಗಳಂತೆ ಜಾತಿ,ಧನಬಲಕ್ಕೆ ಮನ್ನಣೆ ನೀಡಿದ ಯಡಿಯೂರಪ್ಪ ಕೆಲವು ಅರ್ಹರಿಗೆ ಮಾತ್ರ  ಅವಕಾಶ ನೀಡಿದರು.ಇವತ್ತು ಮಂತ್ರಿ ಸ್ಥಾನ ಕಳೆದುಕೊಂಡಿರುವ ಶೋಭಾ ಕರಂದ್ಲಾಜೆ ಎಲ್ಲರ ಸಿಂಪತಿ ಗಿಟ್ಟಿಸಿರಬಹುದು,ಮಂತ್ರಿ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿರಬಹುದೆಂಬ ಮೆಚ್ಚುಗೆಯೂ ಅವರಿಗೆ ದೊರೆಯುತ್ತಿರಬಹುದು.ಈಗ ರೆಡ್ಡಿ ಸಹೋದರರ ಕಾರಣಕ್ಕೆ ಶೋಭಾ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ತಪ್ಪೇ ಇರಬಹುದು.ಆದರೆ ಆಗಿನ ಸಂದರ್ಭದಲ್ಲಿ ಪುತ್ತೂರಿನ ಶಕುಂತಲಾ ಶೆಟ್ಟಿ ಅವರಿಗೆ ಟಿಕೆಟ್ ತಪ್ಪಿಸಿದಾಗಲೇ ಶೋಭಾಗೆ ಮಂತ್ರಿ ಸ್ಥಾನ ನೀಡಲೆಂದೇ ಈ ವಂಚನೆ ಮಾಡಲಾಗಿದೆ ಎಂಬ ದೂರು ಕೇಳಿ ಬಂದಿತ್ತು.ಧನ ಕನಕಗಳಿಗಾಗಿ ಕೆಲವರಿಗೆ ಟಿಕೆಟ್ ನೀಡಿದ ಯಡಿಯೂರಪ್ಪ ಶೋಭಾ ಕಾರಣಕ್ಕೆ ಶಕುಂತಲಾ ಶೆಟ್ಟಿ ಅವರಿಗೆ ವಂಚಿಸಿದ್ದು ಪಕ್ಷದ ದೃಷ್ಟಿಯಲ್ಲೂ,ಸಾರ್ವಜನಿಕವಾಗಿಯೂ ಘೋರ ಅಪರಾಧವಾಗಿ ಕಂಡಿತ್ತು.ಪುತ್ತೂರಿನ ಬಳಿ ಇರುವ ಪುಟ್ಟ ಗ್ರಾಮದಿಂದ ಬಂದ ಶೋಭಾ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಗೆಲ್ಲಲು ಬಿಜೆಪಿ ಪರ ಇದ್ದ ಮತದಾರರ ಒಲವು,ಯಡಿಯೂರಪ್ಪನವರ ವರ್ಚಸ್ಸೂ ನೆರವಾಗಿರಬಹುದು.ಇನ್ನೋರ್ವ ಹಿರಿಯ ಸದಸ್ಯೆ ವಿಮಲಾ ಗೌಡ ವಿಧಾನ ಪರಿಷತ್ ಸದಸ್ಯರಾಗಿರುವಾಗಲೇ ಶೋಭಾಗೆ ಮಂತ್ರಿ ಸ್ಥಾನ ಕೊಟ್ಟಿದ್ದು ಕೆಲವರ ಕೆಂಗಣ್ಣಿಗೆ ಕಾರಣವಾಯಿತು.ಯಡಿಯೂರಪ್ಪ ಮತ್ತು ಶೋಭಾ ನಡುವಿನ ಆತ್ಮೀಯತೆಯೇ ಇದಕ್ಕೆಲ್ಲ ಕಾರಣ ಎಂಬ ಸಲ್ಲದ ಕತೆಗಳು ಹುಟ್ಟಿಕೊಳ್ಳಲು ಸ್ವತಹ ಯಡಿಯೂರಪ್ಪನವರೇ ಕಾರಣರಾದರು. ಯಡಿಯೂರಪ್ಪನವರು ಪಕ್ಷಕ್ಕೆ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದವರಿಗೆ ಟಿಕೆಟ್ ಕೊಟ್ಟರೇ,ಹಣ ಕೊಟ್ಟವರಿಗೆ ಟಿಕೆಟ್ ಕೊಟ್ಟರೇ,ಅಥವಾ ಅರ್ಹರಿಗೆ ಅವಕಾಶ ನೀಡಿದರೇ,ಅಥವ ವೈಯಕ್ತಿಕ ಸಂಬಂಧಗಳಿಗಾಗಿ  ಮಣೆ ಹಾಕಿದರೇ? ಟಿಕೆಟ್ ಮತ್ತು ಮಂತ್ರಿ ಸ್ಥಾನ ನೀಡುವಲ್ಲಿ ಯಡಿಯೂರಪ್ಪ(ಮತ್ತು ಪಕ್ಷ) ಯಾವುದೇ ಮಾನದಂಡ ಅನುಸರಿಸದಿದ್ದುದೂ ತಿರುಗೇಟು ನೀಡಿತು.
ಆನಂತರವಾದರೂ ಆಗಿದ್ದೇನು?ಪದ್ಮಪ್ರಿಯ ನಿಗೂಢ ಸಾವಿನ ಪ್ರಕರಣದಲ್ಲಿ ಸ್ವತಹ ಗೃಹ ಸಚಿವ ವಿ.ಎಸ್.ಆಚಾರ್ಯರೇ ಉಡುಪಿ ಶಾಸಕನ ಆಪ್ತ ಸಹಾಯಕನಂತೆ ವರ್ತಿಸಿ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟರು.ಆಚಾರ್ಯ ಗೃಹ ಸಚಿವರಾಗಿದ್ದಾರೆ ತಾವು ಹೇಳಿದಂತೆ ಕೇಳಿಕೊಂಡಿರುತ್ತಾರೆ ಎಂಬ ಕಾರಣದಿಂದಲೋ ಏನೋ ಆಚಾರ್ಯ ಕಾರ್ಯವೈಖರಿ ಬಗ್ಗೆ ಯಡಿಯೂರಪ್ಪ ಅತೃಪ್ತಿ ವ್ಯಕ್ತಪಡಿಸಲಿಲ್ಲ,ಆನಂತರವೂ ಆಚಾರ್ಯ ಅದಕ್ಷ ಎಂದು ಸಾಬೀತಾಗುತ್ತಿದ್ದರೂ ಅವರನ್ನು ಬದಲಿಸುವ ಗೋಜಿಗೆ ಹೋಗಲಿಲ್ಲ.ಅಷ್ಟೇ ಅಲ್ಲ.ಬಹುತೇಕ ಸಚಿವರು ನಿಷ್ಕ್ರಿಯರೂ,ಅದಕ್ಷರೂ,ಭ್ರಷ್ಟರೂ ಆಗಿದ್ದರೂ ಸಂಪುಟ ಪುನರ್ರಚನೆಗೆ ಮುಂದಾಗಲಿಲ್ಲ.ಅಷ್ಟೋ ಇಷ್ಟೋ ಪ್ರಾಮಾಣಿಕವಾಗಿ,ಕ್ರಿಯಾಷೆಳರಾಗಿ,ದಕ್ಷರಾಗಿದ್ದವರಿಗೆ ಯಡಿಯೂರಪ್ಪ ಸಂಪೂರ್ಣ ಸ್ವಾತಂತ್ರ್ಯವನ್ನ್ನೂ ನೀಡಿರಲಿಲ್ಲ.ಹೇಗಾದರೂ ಅಧಿಕಾರ ಉಳಿಸಿಕೊಳ್ಳಲೇ ಬೇಕೆಂದು ಅನಗತ್ಯವಾಗಿ ಆಪರೇಷನ್ ಕಮಲಕ್ಕೆ ಕೈ ಹಾಕಿ ಬೇರೆ ಪಕ್ಷದಲ್ಲಿದ್ದವರನ್ನೆಲ್ಲ ಕರೆತಂದು ಮಂತ್ರಿ ಸ್ಥಾನ ನೀಡಿದಾಗಲೇ ಯಡಿಯೂರಪ್ಪನವರ ಅವನತಿಯ ಇನ್ನೊಂದು ಅಧ್ಯಾಯ ಆರಂಭವಾಯಿತು.ಪಕ್ಷದಲ್ಲಿರುವವರನ್ನು ನಿರ್ಲಕ್ಷಿಸಿ ಇತರರಿಗೆ ಮಣೆ ಹಾಕಿದ್ದು ಭಿನ್ನಮತದ ಅಪಸ್ವರ ಗಟ್ಟಿಯಾಗಲು ನೆರವಾಯಿತು.ಯಡಿಯೂರಪ್ಪನವರು ಕೇವಲ ಅಧಿಕಾರ,ಜಾತಿ ಬಲ,ಧನಬಲದಿಂದಲೇ ಶಾಶ್ವತವಾಗಿ ಅಧಿಕಾರದಲ್ಲಿ ಇರಬಹುದೆಂಬ ಭ್ರಮೆಗೆ ಒಳಗಾದರು.ಈ ಕಾರಣದಿಂದಲೋ ಏನೋ ಅವರು ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ,ಅವರೊಂದಿಗೆ ಪ್ರೀತಿಯಿಂದ ಬೆರೆಯಲಿಲ್ಲ,ಶಾಸಕರು ಕೋರಿದ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಕೊಡಲೂ ಮುಂದಾಗಲಿಲ್ಲ.ಈ ಕಾರಣದಿಂದ ಅನೇಕ ಶಾಸಕರು ಮುನಿಸಿಕೊಂಡು ಸಂದರ್ಭಕ್ಕಾಗಿ ಕಾಯತೊಡಗಿದರು.ಯಡಿಯೂರಪ್ಪನವರು ಶಾಸಕರನ್ನು ಜತೆಗಿರಿಸಿಕೊಂಡಿದ್ದರೆ ಇವತ್ತು ಅವರು ರೆಡ್ಡಿಗಳಿಗಾಗಿ ಹೆದರಲೆಬೇಕಿರಲಿಲ್ಲ.ಯಡಿಯೂರಪ್ಪನವರು ಪ್ರವಾಹ ಸಂತ್ರಸ್ತರಿಗೆ ವಸತಿ ಒದಗಿಸುವ ಕಾರ್ಯವನ್ನು ಸಹಜವಾಗಿಯೇ ಕಂದಾಯ ಸಚಿವ ಕರುಣಾಕರ ರೆಡ್ಡಿಗೆ ವಹಿಸಬೇಕಿತ್ತು.ಅದರ ಬದಲು ವಸತಿ ನಿರ್ಮಾಣದ ನೇತೃತ್ವವನ್ನು ಸಂಸದ ರಾಜೀವ್ ಚಂದ್ರಶೇಖರ್ ಅವರಿಗೆ ವಹಿಸಿದಾಗ ಅದಕ್ಕೆ ಸಕಾರಣಗಳನ್ನು ನೀಡಬೇಕಿತ್ತು.ಪ್ರವಾಹ ಪರಿಹಾರ ಕಾರ್ಯಗಳಿಗೆ ಹಣದ ಅಗತ್ಯ ಕಂಡು ಬಂದಾಗ ಅದಿರು ಸಾಗಿಸುವ ಲಾರಿಗಳಿಗೆ ಸುಂಕ ವಿಧಿಸುವ ನಿರ್ಧಾರ ಕೈಗೊಳ್ಳುವಾಗ ಅದನ್ನು ಎದುರಿಸುವ ಶಕ್ತಿ ತಮಗಿದೆಯೇ ಎಂದು ಲೆಕ್ಕ ಹಾಕಬೇಕಿತ್ತು.ರೆಡ್ಡಿಗಳು ಪ್ರತ್ಯೇಕವಾಗಿ ಸಂತ್ರಸ್ತರಿಗೆ ವಸತಿ ನಿರ್ಮಾಣ ಕಾರ್ಯ ಕೈಗೊಂಡು ಸರ್ಕಾರಕ್ಕೆ ಇರುಸುಮುರುಸು ಉಂಟು ಮಾಡಿದಾಗ ಅದನ್ನು ಬಗೆಹರಿಸುವ ಪ್ರಯತ್ನಗಳ ಬಗ್ಗೆ ಚಿಂತನೆ ನಡೆಸಬೇಕಿತ್ತು.ಅದು ಬಿಟ್ಟು ರೆಡ್ಡಿ ಸಹೋದರರು ಮತ್ತು ಅವರ ಗೆಳೆಯ ಶ್ರೀರಾಮುಲು ಉಸ್ತುವಾರಿಯ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ವರ್ಗಾ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದರು.ರೆಡ್ಡಿಗಳ ಬಂಡಾಯ ಜೋರಾಗಿ ಅವರು ಮುಖ್ಯಮಂತ್ರಿಯನ್ನು ಬದಲಿಸಬೇಕು,ಶೋಭಾರನ್ನು ಸಂಪುಟದಿಂದ ಕೈಬಿಡಬೇಕು,ತಮ್ಮ ಜಿಲ್ಲೆಗಳಿಂದ ವರ್ಗಾವಣೆ ಮಾಡಿರುವ ಅಧಿಕಾರಿಗಳನ್ನು ಮೊದಲಿದ್ದಲ್ಲಿಗೆ ವರ್ಗಾಯಿಸಬೇಕೆಂದು ಪಕ್ಷದ ವರಿಷ್ಟರಲ್ಲಿ ಒತ್ತಾಯಿಸಿದಾಗ ಯಡಿಯೂರಪ್ಪನವರು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಬೇಕಿತ್ತು.ನಾಯಕನಾದವನು ಯಾವುದೇ ನಿರ್ಧಾರ ಕೈಗೊಳ್ಳಬೇಕಾದ ಸಂದರ್ಭದಲ್ಲಿ ತೋರಿದ ತಾಖತ್ತನ್ನೇ ಈಗಲೂ ತೋರಬೇಕಿತ್ತು.ಬಂಡಾಯಕ್ಕೆ ಕಾರಣರಾದ ಮಂತ್ರಿಗಳು ಕೈಗೊಂಡ ಜನ ವಿರೋಧಿ ನಿಲುವುಗಳನ್ನು ಮತದಾರರಿಗೆ ಮನವರಿಕೆ ಮಾಡಿ ಮೂವರೂ ಮಂತ್ರಿಗಳನ್ನು ಸಂಪುಟದಿಂದ ವಜಾ ಮಾಡಿದ್ದರೆ ಉಳಿದ ಚಿಲ್ಲರೆ ಪಲ್ಲರೆ ಬಂಡುಕೊರರೂ ಯಡಿಯೂರಪ್ಪನವರ ಕಾಲಿಗೆ ಬೀಳುತ್ತಿದ್ದರು.ಅಷ್ಟೇ ಅಲ್ಲ.ನಿಷ್ಕಾರಣವಾಗಿ ಶೋಭಾರನ್ನು ಕೈಬಿಡುವುದಿಲ್ಲ ಎಂದು ಹಠ ಹಿಡಿಯಬೇಕಿತ್ತು,ವರ್ಗಾವಣೆ ಮಾಡಿದ ಅಧಿಕಾರಿಗಳನ್ನು ಸಧ್ಯಕ್ಕೆ ಮತ್ತೆ ವರ್ಗಾವಣೆ ಮಾಡುವುದು ಸಾಧ್ಯವೇ ಇಲ್ಲವೆಂದು ಘೋಷಿಸಬೇಕಿತ್ತು.ಇಷ್ಟಕ್ಕೂ ಮೀರಿ ರೆಡ್ಡಿ ಸಹೋದರರೇ  ಮೇಲುಗೈ ಸಾಧಿಸಿ ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡಿದ್ದರೆ ಅವರು  ಜನಮಾನಸದಲ್ಲಿ ನಿಜವಾದ ಹೀರೋ ಆಗಿ ಕಂಗೊಳಿಸುತ್ತಿದ್ದರು.ಶೋಭಾ ಅವರನ್ನು ಕೈ ಬಿಡಲೇ ಬೇಕಾದ ಸಂ ದರ್ಭದಲ್ಲಿ ಅವರು ಸಾರ್ವಜನಿಕವಾಗಿ ಕಣ್ಣೀರು ಹಾಕಿದಾಗಲೇ ಅವರೊಬ್ಬ ಹೇಡಿಯೆಂದೂ,ನಾಯಕನಲ್ಲವೆಂದೂ,ನಂಬಿದವರನ್ನೂ ನಡುನೀರಿನಲ್ಲಿ ಕೈಬಿಡುವ ಸ್ವಾರ್ಥಿಯೆಂದೂ ಸಾಬೀತಾಯಿತು.      ಆದರೆ ಅವರು ಕೇವಲ ಅಧಿಕಾರ (ಸಮನ್ವಯ ಸಮಿತಿ ರಚನೆಯಾದ ನಂತರ ಅವರು ನಾಮಕಾವಾಸ್ತೆ ಸಿಎಂ ಆಗಲಿದ್ದಾರೆ) ಉಳಿಸಿಕೊಳ್ಳುವ ಸಲುವಾಗಿ ಕೈಗೊಂಡ ಆತುರದ ತೀರ್ಮಾನಗಳಿಂದ ಅವರು ಅಧಿಕಾರಶಾಹಿಯ ಮೇಲೂ ಹಿಡಿತ ಕಳೆದುಕೊಂಡಿದ್ದಾರೆ,ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಬೆಂಬಲವನ್ನೂ ಕಳೆದುಕೊಂಡಿದ್ದಾರೆ,ಮತದಾರರನ್ನೂ ದೂರ ಮಾಡಿಕೊಂಡಿದ್ದಾರೆ.ಒಳ್ಳೆ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡುವ ಸದಾವಕಾಶವನ್ನೂ ಕಳೆದುಕೊಂಡು ಬರಲಿರುವ ಏಕಾಂತದ ದಿನಗಳಿಗೆ ತಮಗೇ ಗೊತ್ತೀಲ್ಲದಂತೆ ಯಡಿಯೂರಪ್ಪನವರು ಕಾಯುತ್ತಿದ್ದಾರೆ. ಹೀಗೆ  ಹೆಣ್ಣು , ಹೊನ್ನು,ಮಣ್ಣು ಯಡಿಯೂರಪ್ಪನವರನ್ನು ಅಲುಗಾಡಿಸುವ ಕಾಯಕದಲ್ಲಿ ಪ್ರಮುಖ ಪಾತ್ರ ವಹಿಸಿದವು.ಮುಖ್ಯಮಂತ್ರಿಯೇ ಆಗಲಿ ಭಿನ್ನಮತೀಯರೇ ಆಗಲಿ ಜನರಿಗಾಗಿ,ಜನಹಿತಕ್ಕಾಗಿ ಕಿತ್ತಾಡದೇ ಕೇವಲ ಸ್ವಾರ್ಥಕ್ಕೆ ಜಗಳ ಮಾಡಿಕೊಂಡರೆನ್ನುವುದೂ ಜಗಜ್ಜಾಹೀರಾಯಿತು.

ಶುಕ್ರವಾರ, ನವೆಂಬರ್ 13, 2009

ಒಂದು ಅಣಕ- ಯಡಿಯೂರಿ ಪತ್ರಿಕಾ ಗೋಷ್ಠಿ

(ರೆಡ್ಡಿ ಬ್ಲಾಸ್ಟ್ ಕ್ಲಬ್ಬಿನಲ್ಲಿ  ಕರುನಾಡ ಮುಖ್ಯಮಂತ್ರಿ ಯಡಿಯೂರಿ ಚಿಂತಾಕ್ರಾಂತರಾಗಿ ಕುಳಿತಿದ್ದರು.ಪತ್ರಕರ್ತರು ಪ್ರಸಾದ
 ಮೇಯ್ದು ಘರ್ಜಿಸಲು ಸಿದ್ಧರಾಗಿದ್ದರು)

 ಗ್ರಾಮ ಸಿಂಹ ಪತ್ರಿಕೆಯ ವರದಿಗಾರ: ನಮಸ್ಕಾರ ಸಾರ್ .ನಿಮಗೆ ರಾಜ್ಯೋತ್ಸವದ ಶುಭಾಶಯಗಳು.

ಯಡಿಯೂರಿ: ರಾಜ್ಯೋತ್ಸವ ಎಲ್ಲಿ ಬಂತ್ರೀ.ರಾಜ್ಯಾನೇ ಅಲ್ಲಾಡ್ತಿರುವಾಗ ಶುಭಾಷಯ ಬೇರೆ ಕೇಡು.
ಗಂಡುಗಲಿ: ಯಾಕೆ ಯಡಿಯೂರಪ್ಪನವರೇ ?ಸಿಟ್ಟು  ಮಾಡ್ಕೋಬೇಡಿ. ತೆಲುಗಿನವರಿಗೆ ನಾನು ಹೆದರೋದಿಲ್ಲ,ಅವರ್ಯಾರನ್ನೂ ಕೇರ್ ಮಾಡೋದಿಲ್ಲ ಅಂತ ಹೇಳಿದರಂತೆ.

ಯಡಿಯೂರಿ: ನಾನೆಲ್ರೀ ಹಾಗೆ ಹೇಳಿದ್ದೀನಿ?ಇದೆಲ್ಲಾ ಮಾಧ್ಯಮಗಳ ಸೃಷ್ಟಿ.

ಘರ್ಜನೆ: ಸ್ವಾಮಿ, ಇಪ್ಪತ್ನಾಲ್ಕು ಗಂಟೆ ಚಾನಲ್ನಲ್ಲಿ ನಿಮ್ಮ ಮಾತೇ ಘಂಟೆ ಹೊಡೆದಾಗೆ ಬಂದಿದೆ, ಹೇಳ್ಲಿಲ್ಲ ಅಂದ್ರೆ ಹೆಂಗ್ ಬುದ್ಧೀ?

ಯಡಿಯೂರಿ: ನಾನು ತೆಲುಗಿನವರ ವಿಚಾರ ಮಾತಾಡಲಿಲ್ಲ ಅಂತ ಹೇಳಲಿಲ್ಲ.ನಾನು ಹೇಳಿದ್ದೇ ಬೇರೆ ,ನೀವು ಬರೆದಿದ್ದೇ ಬೇರೆ.ನನಗೆ ತೆಲುಗಿನವರನ್ನು ಕಂಡ್ರೆ ಆಗಲ್ಲ ಅಂತ ಯಾರ್ರೀ ಹೇಳಿದ್ದು? (ಗುಟ್ಟು ಹೇಳುವ ರೀತಿಯಲ್ಲಿ ಬಾಯಿಗೆ ಕೈ ಅಡ್ಡ ಇಟ್ಟುಕೊಂಡು "ನಾನು ಆಂಧ್ರ ಸೀಯೇಮ್ ಎಷ್ಟು ಕ್ಲೋಸ್ ಅಂತ ನಿಮಗೇ ಗೊತ್ತು.ಅವರು ಬೆಂಗಳೂರಿಗೆ ಬಂದು ಹೋದ ಮೇಲೆ ಏನಾಗ್ತಿದೆ ಅಂತ ನೀವೇ ನೋಡ್ತಾ ಇದೀರಲ್ಲಾ.ಆ ಬಳ್ಳಾರೀ ಬಡ್ಡೀ ಮಕ್ಳೀಗೆ ಯಂಗೆ ಗುಮ್ತಿದಾರೆ ನೋಡಿದ್ರಾ? ಇನ್ನು ನನ್ನ ತಂಟೆಗೆ ಬರೋಕೆ ಪುರುಸೊತ್ತಾದರೂ ಅವ್ರಿಗೆ ಎಲ್ಲಿದೆ?

ಗುಳಿಗೆ ಸಿದ್ದ: ಯಾರಿಗೂ ಬಗ್ಗೊಲ್ಲಾ , ಜಗ್ಗೋಲ್ಲ,ಯಾರ ಒತ್ತಡಕ್ಕೂ ಮಯೋಲ್ಲ ಅಂತ ಹೇಳಿದ್ರಿ.ಈಗ ನೋಡಿದ್ರೆ ಬಳ್ಳಾರಿಯವರು ನಿಮಗೆ ಬಳೆ,ಸೀರೆ,ಅರಸಿನ,ಕುಂಕುಮ ಎಲ್ಲಾ ಕಳಿಸಿದಾರಂತೆ?

ಯಡಿಯೂರಿ: ನನಗ್ಯಾಕ್ರೀ ಕಳಿಸ್ತಾರೆ? ಸುಶ್ !ಮಾ ಗೆ ಕಳಿಸಿದ್ದು ಅಡ್ರೆಸ್ ತಪ್ಪಾಗಿ ನನಗೆ ಬಂದುಬಿಟ್ಟಿದೆ.

ಪ್ರತಿಧ್ವನಿ (ಕುಹಕ ನಗೆ ಬೀರುತ್ತಾ) : ಮುಖ್ಯಮಂತ್ರಿ ಚಂದ್ರು ರಾಜ್ಯೋತ್ಸವ  ಆಹ್ವಾನ ಪತ್ರಿಕೆಯಲ್ಲಿ ನಿಮ್ಮ ಹೆಸರಿರಬೇಕಾದ ಜಾಗದಲ್ಲಿ "ಬೂಸಿ ಯಡಿಯೂರಪ್ಪ" ಅಂತ ಹಾಕಿದ್ಯಾಕೆ ಸಾರ್?

ಯಡಿಯೂರಿ: ನಾನೆಲ್ರೀ ಬೂಸಿ ಬಿಡ್ತಿದೀನಿ? ಅವ್ನ್ಯಾರ್ರೀ ಮುಖ್ಯಮಂತ್ರೀ? ಈ ನಾಡಿಗೆ ನಾನೇ ಪರ್ಮನೆಂಟ್ ಮುಖ್ಯಮಂತ್ರಿ.ಮಂಕಯ್ಯ,ಬಾಟಲಿ ಅರುಣ್,ನಾಥ ಸಿಂಗ್ ಯಾರನ್ನು ಬೇಕಾದರೂ ಕೇಳಿ.ನಾನೇ ಮುಖ್ಯಮಂತ್ರಿ (ಎನ್ನುತ್ತಾ ನಗೆ ತಂದುಕೊಂಡು "ನಾನೇ ರಾಜಕುಮಾರ,ಕನ್ನಡ ನಾಡಿನ ಪ್ರೀತಿಯ ಕುವರ ಎಂದು ಹಾಡುತ್ತಾ ಪತ್ರಿಕಾಗೊಷ್ಟಿಯಲ್ಲಿರುವುದು ನೆನಪಾಗಿ..)ಅವ್ನು ಯಾರೇ ಇರ್ಲಿ,ಜಗದೀಶ ಅಲ್ಲ ಧರಣಿಶ ಅಥವಾ ಗಣಿ ಈಶ  ಬಂದರೂ ನಾನು ಯಡಿಯೂರು,ಹೆಡೆ ಎತ್ತಿದ ಅಂದ್ರೆ ಮಗ ಲಪಕ್. (ಚಿತ್ರ ನಟ ಉದಯಕುಮಾರ ಶೆಯ್ಲಿಯಲ್ಲಿ ಗಹಗಹಿಸಿ ನಗುತ್ತಾರೆ.ಅವರು ಇತ್ತೀಚಿನ ಚಿತ್ರಗಳನ್ನು ನೋಡದ ಕಾರಣ ಹಳೇ ಶಯ್ಲಿಯಲ್ಲೇ ನುಗ್ಗುತ್ತಾರೆ.ಆ ಹೊತ್ತಿಗೆ ಅಲ್ಲಿಗೆ ಆಕಸ್ಮಿಕವಾಗಿ ಬಂದ ಮುಖ್ಯ ಮಂತ್ರಿ ಚಂದ್ರುವನ್ನು ದುರುಗುಟ್ಟಿ ನೋಡುತ್ತಾ) ಯಾಕ್ರೀ ನೀವೂ ಆ ಬಡ್ಡೀ ಮಕ್ಳ ಜತೆ ಸೇರಿಕೊಂಡು ನನ್ನನ್ನೇ ಬೂಸಿ ಯಡಿಯೂರಪ್ಪ ಅಂತ ಕರಿತಿದೀರಾ? ಇನ್ನು ನಿಮ್ಮನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ್ಯರಾಗಿ ಮುಂದುವರಿಸೋದು ಸಾಧ್ಯವೇ ಇಲ್ಲ.ಹಾಗೊಂದು
 ವೇಳೆಮುಂದುವರಿಸಬೇಕಾದ್ರೂ ನೀವು ಆ ಬಡ್ಡೀ ಮಕ್ಕಳ ಜತೆ ಇಲ್ಲ ಅಂತ ಪ್ರೂವ್  ಮಾಡಬೇಕು.ನಿಮ್ ಹೆಸರಿನಿಂದ ಮುಖ್ಯಮಂತ್ರಿ ಅನ್ನೋದನ್ನು ತೆಗೆದು ಹಾಕಬೇಕು.

ಮು.ಮಂ.ಚಂ.: ಯಾಕ್ ಯಡಿಯೂರಪ್ಪನವ್ರೆ ನನ್ನ ಮೇಲೂ ಅನುಮಾನಾನಾ? ನಾನು ಎಲ್ಲವನ್ನೂ ಕನ್ನಡದಲ್ಲೇ ಬರೆಯಬೇಕೆಂದು ನಿಮ್ಮ ಇನಿಶಿಯಲ್ಲನ್ನೂ ಕನ್ನಡದಲ್ಲೇ ಹಾಕಿದೀನಿ.ಬೂ ಅಂದ್ರೆ ಬೂಕನಕೆರೆ,ಸಿ ಅಂದ್ರೆ ಸಿದ್ದಲಿಂಗಪ್ಪ ಅಷ್ಟೇ.ಆದರೂ
 ಇವತ್ತಿನ ಪರಿಸ್ಥಿತಿಗೆ ಈ ಹೆಸರೇ  ನಿಮಗೆ ಚೆನ್ನಾಗಿ ಒಗ್ಗುತ್ತೆ.ಹ ಹ ಹ .
  ಹರೋಹರ (ಬೆಣ್ಣೆ ಹಚ್ಚುವ ದನಿಯಲ್ಲಿ) :ಚಂದ್ರುಗಳೇ,ನೀವು ಫ್ರೆಶ್ ಮೀಟ್ಗೆ ಬಂದಿದ್ದು ಒಳ್ಳೇದೇ ಆಯ್ತು.ಇಲ್ಲಾ ಅಂದಿದ್ರೆ ಅಣ್ಣಾವ್ರು ತಪ್ಪು ತಿಳ್ಕೊಳ್ತಿದ್ರು.

ಸಿಂಗಾರಿ: ಸರ್ ನೀವು ಮೊನ್ನೆ ಬಿಕ್ಕಿ ಬಿಕ್ಕಿ ಅತ್ರಲ್ಲಾ ಅಬ್ಬಾಯಿ ನಾಯ್ಡು ಇದ್ದಿದ್ರೆ ತಂದೆಯ ಮಡಿಲು ಅಂತಾ ಫಿಲಂ ತೆಗೀತಿದ್ರು ಅಲ್ವಾ ಸರ್?

ಯಡಿಯೂರಿ: ನೋಡಿ ನಾಯ್ಡು ಗೀಯ್ದು ಅಂತವರ ಹೆಸರೆತ್ಬೇಡಿ.ನಂಗೆ ಈ ಹೆಸರುಗಳೆಂದರೆ ಅಲರ್ಜಿ.

ಸಿಂಗಾರಿ: ಸರ್, ಶಾರ್ಟ್ ಅಂಡ್ ಸ್ವೀಟ್ ಆಗಿ ಮುಖ್ಯಮಂತ್ರಿ ಚಂದ್ರು ಶಯ್ಲಿಯಲ್ಲಿ ಕೇಳೋದಾದರೆ ನಿಮ್ಮ "ಶೋಕ" ಪರಿಸ್ಥಿತಿಗೆ ಕಾರಣವಾದರೂ ಏನು?

ಯಡಿಯೂರಿ: ಶೋಕ ಎಲ್ಲೀರಿ ? ಆ ಕ್ಷಣಕ್ಕೆ ದುಃಖ ಆಯ್ತು ಅತ್ತೆ .

ಸಿಂಗಾರಿ: ಸರ್, ಶೋಕ ಅಂದ್ರೆ  ಶೋಭಾ ಕರಂದ್ಲಾಜೆ.ನಾನು ಕೇಳಿದ್ದು ಅವರ  ಪರಿಸ್ಥಿತಿ.

ಯಡಿಯೂರಿ: ನೋಡಿ ಇದೆಲ್ಲಾ ಬರ್ಕೊಬೇಡಿ. ಆಪ್ ದಿ ರೆಕಾರ್ಡ್ ಹೇಳ್ತೀನಿ.(ಪಿಸುಗುಟ್ಟುವ ದನಿಯಲ್ಲಿ) ಆ ಕರುಣಾಕರ ಇದಾನಲ್ಲಾ ಹೆಸರು ಹಾಗೆ ಇಟ್ಕೊಂಡಿದಾನೆ ಅಷ್ಟೇ. ಒಂದಿಷ್ಟೂ ಕರುಣೆ ಇಲ್ಲದ ಮನುಷ್ಯ ಅವನು.ತಮ್ಮನಿಗೆ ಬುದ್ಧಿ ಹೇಳುವ ಬದಲು ಉರಿಯುವ ಬೆಂಕಿಗೆ ತುಪ್ಪ ಹಾಕ್ತಾನೆ.ನಾಟ್ಕ ಇನ್ನೂ ಮುಗ್ದಿಲ್ಲ ಅಂತಾನೆ.ಈಗಷ್ಟೇ ಶುರುವಾಗಿದೆ ಅಂತಾನೆ.ಅವ್ನು ಅವ್ನ ತಮ್ಮ ಎಲ್ಲ ಸೇರ್ಕೊಂಡು ಡೆಲ್ಲಿಯಲ್ಲಿ ಏನ್ ಮಾಡಿದಾರೆ ಗೊತ್ತಾ? ಶ್ರೀರಾಮುಲುವನ್ನೇ ಅಯೋಧ್ಯೆಯ ಶ್ರೀರಾಮಚಂದ್ರ ಅಂತ ಎಲ್ಲ ಲೀಡರ್ಗಳಿಗೆ ನಂಬಿಸಿದ್ದಾರೆ.ಅದಕಾಗಿ
  ಅವರೆಲ್ಲ ಈತನೇ ದೇವ್ರು ಅಂತ ಅವರು ಹೇಳಿದಕ್ಕೆಲ್ಲಾ ಒಪ್ಪಿಗೆ ಕೊಡ್ತಾ ಇದಾರೆ.

ಬಂಗಾರಿ;ಲೇಟೆಸ್ಟ್ ನ್ಯೂಸ್ ಪ್ರಕಾರ ಮುಖ್ಯಮಂತ್ರೀನ ಬದಲಿಸ್ತಾರೆ ಅಂತಾರಲ್ಲ? ನೀವುಮಾಡಿದ್ದೆಲ್ಲಾ
 ಸರಿ ಎನ್ನುವ ಹೌದಪ್ಪ we.yes. ಆಚಾರ್ಯ ಆದ್ರೆ ನೀವು ಒಪ್ಕೊಳ್ತೀರಂತೆ?

ಯಡಿಯೂರಿ: ಯಾರ್ರೀ ಒಪ್ಗೆ ಕೊಡೋದು?ನಾನೇ ಪರ್ಮನೆಂಟ್ ಮುಖ್ಯಮಂತ್ರಿ ಅಂತ ತೀರ್ಮಾನ ಆಗಿದೆ.ಇಲ್ಲಾ ಅಂದ್ರೆ ನಾನೂ ಕೂಡಾ ಜಾತ್ಯಾತೀತ ಭಾರತೀಯ ಜನತಾ ಪಕ್ಷ ಎಂಬ ಶರಣರ ಪಕ್ಷ ಕಟ್ಟುತ್ತೇನೆ.

ಗುಮ್ಮಣ್ಣ: ನೀವು ಶಾಸಕರನ್ನು ನಿರ್ಲಕ್ಷಿಸಿ ಅವರನ್ನು ದೂರ ಇರಿಸಿ ಆಡಳಿತ ಮಾಡುತ್ತಿದ್ದ ಕಾರಣ ಈ ಪರಿಸ್ಥಿತಿ ಬಂತು ಅಂತಾರೆ?

ಯಡಿಯೂರಿ: ಎಲ್ಲ ಸುಳ್ಳು.ನಾನು ಎಲ್ಲ ಶಾಸಕರನ್ನು,ಮಂತ್ರಿಗಳನ್ನು ಜತೆಯಲ್ಲೇ ಇರಿಸಿಕೊಂಡಿದ್ದೆ.ಪ್ರತಿಯೊಬ್ಬರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದೆ.

ಗುನ್ನಯ್ಯ: ಸರ್,ಕೊನೆ ಪ್ರಶ್ನೆ.ನಿಮ್ಮ ಸಚಿವ ಸಂಪುಟದಲ್ಲಿದ್ದ ಏಕೈಕ ಮಹಿಳಾ ಸಚಿವರನ್ನು ಕೈ ಬಿಟ್ಟಿದ್ದು ಸರಿಯೇ?

ಯಡಿಯೂರಿ: ಏನ್ರೀ ನಿಮಗೆ
 ತಲೆ ಕೆಟ್ಟಿದೆಯೇ? ಸಂಪುಟದಲ್ಲಿ ಮುಮತಾಜ್ ಕೂಡ ಇದಾಳಲ್ಲ? (ಎಲ್ಲರೂ ಬಿದ್ದು ಬಿದ್ದು ನಗುವರು. ಯಡಿಯೂರಿ ಏನೂ ಅರ್ಥವಾಗದವರಂತೆ ಆಕಾಶದತ್ತ ನೋಡುವರು.ಅಲ್ಲೂ ಕೂಡ ಬಡ್ಡಿ ಮಕ್ಕಳನ್ನು ಕಂಡಂತಾಗಿ ಬೆಚ್ಚಿ ಬೀಳುವರು)

ಬುಧವಾರ, ನವೆಂಬರ್ 11, 2009

ಶೋಭಾಹೀನ ಸರ್ಕಾರ

ದೆಹಲಿಯ ಎಲ್ಲ ಬಿಜೆಪಿ ದಣಿಗಳು ವಿಫಲರಾದ ನಂತರ ಸುಷ್ಮಾ ಸ್ವರಾಜ್ ಎಂಬ ನಾಯಕಿ ಯಡಿಯೂರಿ ಮತ್ತು ರೆಡ್ಡಿ ಸಹೋದರರ ನಡುವೆ ಸಂಧಾನ ರೊಪಿಸುವಲ್ಲಿ ಯಶಸ್ವಿಯಾದರೆಂದು ಎಲ್ಲ ಮಾಧ್ಯಮಗಳು ಬಿಂಬಿಸಿದವು.ಸಂಧಾನ ಎಂದರೆ ಏನರ್ಥ? ಕೊಡು ಕೊಳ್ಳುವುದು ಬಿಟ್ಟರೆ ಬೇರೇನಲ್ಲ. ಆದರೆ ಯಡಿಯೂರಿ ಕೊಟ್ಟಿದ್ದು ಬಿಟ್ಟರೆ ಕೊಂಡಿದ್ದಾದರೂ ಏನು? ಮುಖ್ಯಮಂತ್ರಿ ಎಂಬ ಯಾವುದೇ ಅಧಿಕಾರ ಇಲ್ಲದ ಹಣೆಪಟ್ಟಿ ಉಳಿಸಿಕೊಂಡಿದ್ದು ಬಿಟ್ಟರೆ ಮತ್ತೇನಿಲ್ಲ. ಯಡಿಯೂರಿ ತಮ್ಮ ಪ್ರಧಾನ ಕಾರ್ಯದರ್ಶಿ ಬಳಿಗಾರ್ ಅವರನ್ನು ವರ್ಗಾ ಮಾಡಿದರು,ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಬಯಸಿದ ಅಧಿಕಾರಿಗಳನ್ನು ಅವರ ಜಿಲ್ಲೆಗಳಿಗೆ ಮತ್ತೆ ವರ್ಗಾ ಮಾಡಿದರು.
ದೆಹಲಿಯಿಂದ ವಾಪಸಾದ ರಾತ್ರಿ ಮಂತ್ರಿಮಂಡಲದಿಂದ ಯಾರನ್ನೂ ಕೈ ಬಿಡುವುದಿಲ್ಲ ಎಂದು ಯಡಿಯೂರಿ ವೀರಾವೇಶದಿಂದ ಹೇಳಿದರಾದರೂ ಮಾರನೆ ದಿನ ಬೆಳಿಗ್ಗೆಯೇ ಶೋಭಾರಿಂದ ರಾಜಿನಾಮೆ ಪಡೆದು ಅಂಗೀಕರಿಸಿಯೂಬಿಟ್ಟರು.ಸುಷ್ಮಾ ಸ್ವರಾಜ್ ಬಿಜೆಪಿಯ ಮಹಿಳಾ ಮುಖವಾಗಿದ್ದು ಕರ್ನಾಟಕದಲ್ಲಿ ಸ್ವಂತ ಶಕ್ತಿಯಿಂದ ಬೆಳೆಯುತ್ತಿರುವ ಶೋಭಾ ಅವರನ್ನು ಬಳಿ ಪಶು ಮಾಡಿದ್ದಾದರೂ ಯಾಕೆ? ಸುಷ್ಮಾ ಸ್ವತಃ ಶೋಭಾ ರಕ್ಷಣೆಗೆ ಮುಂದಾಗಬೇಕಿತ್ತು. ಅದು ಬಿಟ್ಟು ಶೋಭಾಗೆ ಮಂತ್ರಿಮಂಡಲದಿಂದ ಸೆಂಡ್ ಆಪ್ಹ್ ನೀಡಲು ಒಪ್ಪಿಗೆ ಕೊಟ್ಟಿದ್ದಾದರೂ ಯಾಕೆ?
ಸುಷ್ಮಾಗೆ ಶೋಭಾ ಅಪರಿಚಿತರೇನಲ್ಲ. ಸುಷ್ಮಾ ಬಳ್ಳಾರಿಯಲ್ಲಿ ಚುನಾವಣೆಗೆ ನಿಂತಾಗ ಶೋಭಾ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿದ್ದ ರು. ರಾಜಕೀಯ ಕುಟುಂಬದ ಹಿನ್ನೆಲೆಯೇ ಇಲ್ಲದ ಶೋಭಾಗಿಂತ ರೆಡ್ಡಿ ಸಹೋದರರ ಪಕ್ಷಪಾತಿಯಾಗಿ ಸುಷ್ಮಾ ನಿಂತಿದ್ದರೆಂದರೆ ರೆಡ್ಡಿಗಳು ಅದ್ಯಾವ ರೀತಿಯಲ್ಲಿ ಸುಷ್ಮಾಗೆ ಪ್ರಸಾದ ನೀಡಿರಬಹುದು?
ಇಷ್ಟೆಲ್ಲಾ ಆಗುತ್ತಿದ್ದರೂ ಯಡಿಯೂರಿ ಮಾತ್ರ ರಾಜ್ಯವನ್ನು ಯಾರಿಗೂ ಒತ್ತೆ ಇಟ್ಟಿಲ್ಲ,ಯಾರಿಗೂ ಬೆದರುವುದಿಲ್ಲ,ಶೋಭಾ ಯಾವ ತಪ್ಪು ಮಾಡದಿದ್ದರೂ,ಸಚಿವರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರನ್ನು ಕೈ ಬಿಡಬೇಕಾಯಿತು,ರಾಜಕೀಯದಲ್ಲಿ ಕೆಲವೊಮ್ಮೆ ಪ್ರಾಮಾಣಿಕತೆಗೆ,ಕ್ರಿಯಾಶೀಲತೆಗೆ ಬೆಲೆ ಸಿಗುವುದಿಲ್ಲ ಎಂದು ಬಡಬಡಿಸುತ್ತಿದ್ದಾರೆ. ಅವರನ್ನು ನೋಡಿದರೆ ನಗು ಬರುತ್ತದೆ.ಅಷ್ಟೇ ಅಲ್ಲ ಕರುನಾಡ ಇತಿಹಾಸದಲ್ಲಿ ಹಾಸ್ಯಾಸ್ಪದ ಮುಖ್ಯಮಂತ್ರಿಯೋಬ್ಬರಿದ್ದರೆಂದು ಭವಿಷ್ಯದಲ್ಲಿ ಹೇಳಲು ಒಳ್ಳೆ  ಉದಾಹಾರಣೆಯೂ   ದಾಖಲಾಗಿದೆ.ಸುಷ್ಮಾ ಸಂಧಾನದಿಂದ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದೂ ಮತ್ತೊಮ್ಮೆ ಸಾಬೀತಾಗಿದೆ.

ಭಾನುವಾರ, ನವೆಂಬರ್ 8, 2009

ಹೇಡಿಯೂರಪ್ಪ ಶರಣಾಗತಿ

ಎಂಥ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧರಾಗಿರುವ Ready ಬ್ರದರ್ಸ್ ಎದುರು  ಹೇಡಿಯೂರಪ್ಪ ಶರಣಾಗಿದ್ದಾರೆ .ಸರ್ಕಾರ ಎಂದರೆ ವ್ಯಾಪಾರ ಎಂಬ ಸಿದ್ಧಾಂತವನ್ನು ಈ ಮೂಲಕ ಬಿಜೆಪಿ ಪ್ರದರ್ಶಿಸಿದೆ.ಸಂಧಾನ ಸೂತ್ರ ನೋಡಿದರೆ ಇನ್ನು ಹೇಡಿಯೂರಪ್ಪ ಕೇವಲ ಯಂತ್ರ ಮಾನವನಂತೆ,ಅರ್ಥಾತ್ ರೊಬೋಟ್ ತರಹ ಕೆಲಸ ಮಾಡಬೇಕಿದೆ.ಯಾಕೆಂದರೆ ಈ ರೊಬೋಟ್ ಹಿಡಿತ ದೆಹಲಿ ದಣಿಗಳಾದ ಸುಷ್ಮಾ ಸ್ವರಾಜ್,ವೆಂಕಯ್ಯ ನಾಯ್ಡು ,ಅರುಣ್ ಜೇಟ್ಲಿ ಕೈಯಲ್ಲಿರುತ್ತದೆ.ಈ ರೊಬೋಟ್ ಮಾಲೀಕರು ಕನ್ನಡಿಗರಾದರೂ ರಿಮೋಟ್ ಮಾಲೀಕರು ವ್ಯಾಪಾರಿಗಳಾದ ರೆಡ್ಡಿಗಳು. ರೋಬೋಟ್ಗೆ ಸ್ವತಂತ್ರ ನಿರ್ವಹಣೆಯ ಶಕ್ತಿ ಇಲ್ಲದ ಕಾರಣ ಅದು ಏನು ಮಾಡಬೇಕೆಂಬ ಫೀಡ್ ರೆಡ್ಡಿಗಳು ಒದಗಿಸುತ್ತಾರೆ.ಅಂದರೆ ಯಡಿಯೂರಪ್ಪನವರು ಬೆನ್ನು ಮೂಳೆ ಇಲ್ಲದ,ಮೆದುಳಿಲ್ಲದ ಪರಾವಲಂಬಿ ಸೇವಕರಾಗಿರುತ್ತಾರೆ.ಇನ್ನು ಅವರು ಮುಖ್ಯಮಂತ್ರಿಯಾಗಿರುವುದರಲ್ಲಿ ಅರ್ಥವೂ ಇಲ್ಲ.ಪ್ರಜಾಸತ್ತೆಯನ್ನೇ ಅಣಕಿಸುವಂಥ ತೀರ್ಮಾನವನ್ನು ಬಿಜೆಪಿ ವರಿಷ್ಟರು ಕೈಗೊಂಡ ಮೇಲೆ ಯಡಿಯೂರಪ್ಪನವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಪ್ರಶ್ನೆಯೇ ಇಲ್ಲ.ಪ್ರಜಾಸತ್ತೆ ಅಂದರೆ ಮುಖ್ಯಮಂತ್ರಿ ಸರ್ವಾಧಿಕಾರಿ ಅಲ್ಲ ನಿಜ. ಆದರೆ ಆಯ್ಕೆ ಮಾಡಿದ ಮತದಾರರ ನೋವು ನಲಿವಿಗೆ ಸ್ಪಂದಿಸುವ ಬದಲು ದೆಹಲಿ ದಣಿಗಳು ಮತ್ತು ಭೂಮಿ ಕೊಳ್ಳೆ ಹೊಡೆಯುವ ಮಂದಿಯ ಅನುಕೂಲಕ್ಕೆ ತಕ್ಕಂತೆ ನರ್ತಿಸುವುದಕ್ಕೆ ಯಡಿಯೂರಪ್ಪನವರೇ ಯಾಕೆ ಬೇಕು? ದುಷ್ಟ ರೆಡ್ಡಿ ಕೂಟದ ಮಂತ್ರಿಗಳನ್ನು ವಜಾ ಮಾಡಿ ಅಂಥವರ ಮೇಲೆ ಶಕ್ತಿ ಪ್ರದರ್ಶಿಸುವ ಅಡಿಯೂರಪ್ಪ ಆಗಬೇಕಿತ್ತೇ ಹೊರತು ಹೇಡಿಯೂರಪ್ಪ ಆಗಬಾರದಿತ್ತು.   

ಶನಿವಾರ, ನವೆಂಬರ್ 7, 2009

ಮುಖ್ಯಮಂತ್ರಿ ಕಣ್ಣೀರುಖಾಸಗಿ ಟಿವಿ ವಾಹಿನಿಯ ಸಂದರ್ಶನವೊಂದರಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಣ್ಣೀರಿಟ್ಟರು.ತಮ್ಮನ್ನು ನಂಬಿದವರನ್ನೇ ಕೈ ಬಿಡಬೇಕಾದ ಪರಿಸ್ಥಿತಿ ಬಂದಿದ್ದಕ್ಕೆ ದೇವರು ತಮ್ಮನ್ನು ಕ್ಷಮಿಸಬೇಕೆಂದು ಬೇಡಿಕೊಂಡರು.ಪೂರ್ಣಾವಧಿ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಮೊರೆ ಇಟ್ಟರು.ಕೇವಲ ಅಧಿಕಾರಕ್ಕಾಗಿ,ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ತಾನು ಅಸಹಾಯಕನಾಗಿರುವ ಬಗ್ಗೆ ನೋವನುಭವಿಸುತ್ತಿರುವುದಾಗಿ ಹೇಳಿಕೊಂಡರು.  ಈ ದೃಶ್ಯ ನೋಡಿದ ನಾಡಿನ ಅಸಂಖ್ಯಾತ ಜನರು 'ಅಯ್ಯೋ' ಎಂದಿರಬಹುದು.ಆದರೆ ನಾಯಕನಾದವನು ಸಾರ್ವಜನಿಕವಾಗಿ  ಕಣ್ಣೀರಿಡುವುದು ಎಷ್ಟು ಸರಿ?

ನಾಯಕನಾದವನುಎಲ್ಲರನ್ನೂ ಜತೆಯಾಗಿ ಕರೆದೊಯ್ಯುವ ಜತೆಗೆ ಪ್ರಾಮಾಣಿಕತೆ,ಜಾತ್ಯಾತೀತತೆ,ದೂರದೃಷ್ಟಿ,ಕ್ರಿಯಾಶೀಲತೆ,ದಿಟ್ಟತನ,ನಾಡಿನ ಹಿತಕ್ಕಾಗಿ ಅಧಿಕಾರ ತ್ಯಾಗ ಮಾಡುವ ಛಾತಿಯನ್ನೂ ಹೊಂದಿರಬೇಕು. ನಿಜ ನಾಯಕನಿಗೆ ಅಧಿಕಾರದ ಅಮಲೂ ಇರುವುದಿಲ್ಲ, ವ್ಯಾಮೋಹವೂ ಇರುವುದಿಲ್ಲ.ಹಾಗಾದರೆ ಯಡಿಯೂರಪ್ಪನವರು ನಾಯಕರಲ್ಲವೇ? ಬಿಜೆಪಿಯಲ್ಲಿರುವ ಇತರರಿಗೆ
 ಹೋಲಿಸಿದರೆ  ಅವರು ಮಾಸ್ ಲೀಡರ್.ವಿರೋಧ ಪಕ್ಷದ ನಾಯಕನಾಗಿದ್ದಾಗ ಅವರು ಪ್ರದರ್ಶಿಸುತ್ತಿದ್ದ ಸಿಟ್ಟು,ಆಕ್ರೋಶ ತುಂಬಾ ಜನಪ್ರಿಯತೆ ಗಳಿಸಿತ್ತು. ಆದರೆ ಆ ಸಂದರ್ಭದಲ್ಲಿದ್ದ ಸರ್ಕಾರ  ಜನತೆಗೆ ಅನ್ಯಾಯ ಮಾಡುತ್ತಿದೆ ಎಂದು ಒಮ್ಮೆಯೂ ಅವರು ಕಣ್ಣೀರು ಇಟ್ಟಿರಲಿಲ್ಲ.ಅಧಿಕಾರ ಗದ್ದುಗೆಗೆ ಏರಬೇಕಾದ ಆತುರ,ಅಸಹನೆ,ಅಕ್ರೋಶ ಅವರಲ್ಲಿ ಇತ್ತೇ ಹೊರತು ಜನರಿಗಾಗಾಗಿ ಕಂಬನಿ ಮಿಡಿಯುವ ಹೃದಯ ಅವರಲ್ಲಿ ಇದ್ದಿರಲಾರದು ಎಂಬ ಅನುಮಾನ ಈಗ ಹುಟ್ಟಿದೆ .ಅಧಿಕಾರಕ್ಕೆ ಬಂದ ನಂತರ ಸುಪ್ತವಾಗಿದ್ದ ವ್ಯಾಮೋಹ , ಭಿನ್ನಮತ ಶುರುವಾದಾಗ 
ಅಸಹಾಯಕತೆಯಿಂದ ಕಣ್ಣೀರ ರೂಪ ಪಡೆಯಿತು.

ಶೋಭಾ ಕರಂದ್ಲಾಜೆ, ಬಳಿಗಾರ್ ನಿಯಮಬದ್ಧವಾಗಿ,ಅರ್ಥಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಯಡಿಯೂರಪ್ಪನವರಿಗೆ ಸಂಪೂರ್ಣ ವಿಶ್ವಾಸ ಇದ್ದಿದ್ದರೆ ರೆಡ್ಡಿಗಳ ಒತ್ತಡಕ್ಕೆ ಮಣಿಯಲೇಬೇಕಿರಲಿಲ್ಲ.ರೆಡ್ಡಿ ಸಹೋದರರು ವ್ಯಾಪಾರಿ ಕಾರಣಗಳಿಗಾಗಿ ಭಿನ್ನಮತ ಶುರು ಮಾಡಿದ್ದರೆ ಈ ಕುರಿತು ಪಕ್ಷದ ವರಿಷ್ಟರಿಗೆ ಮನವರಿಕೆ ಮಾಡಿ ಕರುಣಾಕರ,ಜನಾರ್ದನ ಮತ್ತು  ಶ್ರೀರಾಮುಲುವನ್ನು ಸಂಪುಟದಿಂದ ವಜಾ ಮಾಡಬೇಕಿತ್ತು.ಹಾಗೊಂದು ವೇಳೆ ರೆಡ್ಡಿ ಸಹೋದರರ ಪರವಾಗಿ ಸಾಕಷ್ಟು ಸಂಖ್ಯೆಯಲ್ಲಿ ಶಾಸಕರಿದ್ದು ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದ್ದರೆ ಯಡಿಯೂರಪ್ಪ ಹುತಾತ್ಮರಾಗಿಬಿಡುತ್ತಿದ್ದರು.ಜನಮಾನಸದಲ್ಲಿ ಒಳ್ಳೆ ಸ್ಥಾನ ಪಡೆಯುತ್ತಿದ್ದರು.ರೆಡ್ಡಿಗಳು ಖಳನಾಯಕರಂತೆ ವಿಕಾರವಾಗಿ ಕಾಣುತ್ತಿದ್ದರು.

ನಾಯಕನಾದವನು ಕಣ್ಣೀರಿಟ್ಟರೆ ಅವನ ಅನುಯಾಯಿಗಳು ಅತಂತ್ರ ಸ್ಥಿತಿ ಎದುರಿಸುತ್ತಾರೆ,ವ್ಯಾಪಾರಿ ಬುದ್ಧಿಯ ಪುಡಾರಿಗಳೇ  ನಾಯಕರೆಂಬ ಭ್ರಮೆಯ ಲೆಕ್ಕಾಚಾರದಲ್ಲಿ ತೊಡಗುತ್ತಾರೆ.ಯಡಿಯೂರಪ್ಪ ತರಹದವರು ದುರ್ಬಲರಾಗುತ್ತಾ ಹೋಗುತ್ತಾರೆ. ಕಣ್ಣೀರು ಫಲ ನೀಡುವುದಿಲ್ಲ,ಕೇವಲ ಅನುಕಂಪವನ್ನು ಸೃಷ್ಟಿಸುತ್ತದೆ,ಎಷ್ಟೋ ಸಲ ಇಂಥವರು ಹಾಸ್ಯಾಸ್ಪದರಾಗಿಬಿಡುತ್ತಾರೆ.ಈಗಲೂ ಅಷ್ಟೇ ಕಾಲ ಮಿಂಚಿಲ್ಲ.ಯಡಿಯೂರಪ್ಪ ದಿಟ್ಟತನ ಪ್ರದರ್ಶಿಸಿ ತಾನೂ ನಿಜ ನಾಯಕ ಎಂಬುದನ್ನು ಸಾಬೀತುಪಡಿಸಬೇಕು.  

ಬುಧವಾರ, ನವೆಂಬರ್ 4, 2009

ಸಾಮೂಹಿಕ ಅತ್ಯಾಚಾರ

ಇತ್ತೀಚಿಗೆ ಖಾಸಗಿ ಟಿವಿ ವಾಹಿನಿಯಲ್ಲಿ ರಾಜ್ಯ ರಾಜಕೀಯದ ಸ್ಥಿತ್ಯಂತರ ಕುರಿತು ಚರ್ಚೆ ನಡೆಯುತ್ತಿತ್ತು. ಕಾಂಗ್ರೆಸ್ ಪಕ್ಷದ ನಾಯಕ,ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಉಗ್ರಪ್ಪನವರು ಭಾಗವಹಿಸಿದ್ದರು.ವಾಹಿನಿಯು ಇಬ್ಬರು ನಿರೂಪಕರ (ಒಬ್ಬರು ಎಕ್ಸ್ಪರ್ಟ್ ಅಂತೆ) ಜತೆ ಅದೇ ಮನೋಸ್ಥಿತಿಯ ಇನ್ನೋರ್ವ ಘಟಾನುಘಟಿ  ಪತ್ರಕರ್ತ ಮಹಾಶಯರೂ ಇದ್ದರು.ಈ ಘಟಾನುಘಟಿ ಪತ್ರಕರ್ತರಿಗೆ ಉತ್ತರಿಸಲು ಸಿಗುತ್ತಿದ್ದಷ್ಟು ಕಾಲಾವಕಾಶ ಉಗ್ರಪ್ಪನವರಿಗೆ ಸಿಗುತ್ತಿರಲಿಲ್ಲ. ಉಗ್ರಪ್ಪನವರು ಪೂರ್ತಿಯಾಗಿ ಉತ್ತರಿಸಲೂ ಓರ್ವ ನಿರೂಪಕ ಅವಕಾಶ ನೀಡುತ್ತಿರಲಿಲ್ಲ.ಅಷ್ಟೇ ಅಲ್ಲ.ಮೂವರೂ ಸೇರಿಕೊಂಡು ಉಗ್ರಪ್ಪನವರ ಮೇಲೆ ದಾಳಿ ನಡೆಸುತ್ತ ಖುಷಿ ಅನುಭವಿಸುತ್ತಿದ್ದರು. ಇದು ಎಷ್ಟು ವಿಪರೀತವಾಯಿತೆಂದರೆ ಉಗ್ರಪ್ಪನವರ ಸಹನೆಯ ಕಟ್ಟೆ ಒಡೆದು ,"ನನಗೆ ಮಾತನಾಡಲು ಅವಕಾಶ ಕೊಡಿ,ಇಲ್ಲವಾದರೆ ಎದ್ದು ಹೋಗುತ್ತೇನೆ"ಎಂದು ಎಚ್ಚರಿಸಿದರು.ಆಗ ಈ ಮಹಾಮಹಿಮರೆಲ್ಲ  ಆ ಕ್ಷಣಕ್ಕಾದರೂ ಸುಮ್ಮನಾಗಿ ಉತ್ತರಿಸಲು ಅವಕಾಶ ನೀಡಲೆಬೆಕಾಯಿತು. ಒಂದೊಂದು ಸಲವಂತೂ ರಾಜಕೀಯದ ಗಂಧವೇ ಅರಿಯದ ಪತ್ರಕರ್ತ ಮಹಾಶಯರು ಉಗ್ರಪ್ಪನವರ ಎದುರು ನಗೆಪಾಟಲಿಗೆ ಈಡಾಗಬೇಕಾಯಿತು. ಆಡಳಿತ ಯಂತ್ರವೇ ಬಿದ್ದು ಹೋಗಿದೆ ಎಂಬ ಉಗ್ರಪ್ಪನವರ ಆರೋಪಕ್ಕೆ ಪತ್ರಕರ್ತ ಮಹಾಶಯರು," ಅಧಿಕಾರಿಗಳಿರುವಾಗ ಆಡಳಿತ ಯಂತ್ರ ಬಿದ್ದು ಹೋಗುವುದಿಲ್ಲ,ಯಾರೇ ಇದ್ದರೂ ಇಲ್ಲದಿದ್ದರೂ ಸರ್ಕಾರ ನಡೆಯುತ್ತದೆ ಎಂಬ ಮಹಾನ್ ಬುದ್ಧಿವನ್ತಿಕೆಯ ಉತ್ತರ ಕೊಟ್ಟರು. ಇದಕ್ಕೆ ನಕ್ಕ ಉಗ್ರಪ್ಪ , ಸರ್ಕಾರ ಕೇವಲ ಅಧಿಕಾರಿಗಳಿಂದ ನಡೆಯುವುದಿಲ್ಲ,ಸರ್ಕಾರದ ಕಾರ್ಯಕ್ರಮ ಜಾರಿಗೆ ನಾಯಕನೊಬ್ಬನ ಪ್ರೇರಣೆ ಬೇಕಾಗುತ್ತದೆ,ಅದಕ್ಕೆ ಜತೆಗಾರರ ಬೆಂಬಲವೂ ಇರಬೇಕಾಗುತ್ತದೆ,ಕೇವಲ ಅಧಿಕಾರಿಗಳೇ ನಡೆಸುವುದು ಕಚೇರಿಯಾಗುತ್ತದೆಯೇ  ಹೊರತು ಸರ್ಕಾರವಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.ಪತ್ರಕರ್ತ ಮಹಾಶಯರು ಬಾಯಿ ಮುಚ್ಚಿ ಕೂತರು. ಆನಂತರವೂ ಮೂವರೂ ಮಹಾನುಭಾವರ ದಾಳಿ ಮುಂದುವರಿಯಿತು.ಉಗ್ರಪ್ಪನವರು ಏಕಾಂಗಿ ವೀರರಾಗಿ ಹೋರಾಟ ಮುಂದುವರಿಸಿದರು. ಈ ಕಾರ್ಯಕ್ರಮವನ್ನು ನೋಡಿದ ನಿರಂತರವಾಗಿ ರಾಜಕೀಯ ವರದಿ ಮಾಡುವ ಪತ್ರಕರ್ತರೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ," ಮೂವರು ನಡೆಸಿದ ಸಾಮೂಹಿಕ ಅತ್ಯಾಚಾರ ಪ್ರಯತ್ನಕ್ಕೆ ಉಗ್ರಪ್ಪ ಮುಟ್ಟಿ ನೋಡಿಕೊಳ್ಳುವಂತ ಪೆಟ್ಟು ಕೊಟ್ಟರು"     

ಸೋಮವಾರ, ನವೆಂಬರ್ 2, 2009

ಬಿಜೆಪಿ ಭಿನ್ನಮತಕ್ಕೆ ಹೈದರಾಬಾದ್ ಕನೆಕ್ಷನ್

ರಾಜಕೀಯದ ಲೆಕ್ಕಾಚಾರಗಳೇ ಹಾಗೆ.ನೆರೆಯ ಆಂಧ್ರವನ್ನೇ ನೋಡಿ.ಸಂಖ್ಯಾಬಲದಲ್ಲಿ ಅತಿ ಸಣ್ಣ ವೈಶ್ಯ ಸಮುದಾಯಕ್ಕೆ ಸೇರಿದ ರೋಸಯ್ಯ ಮುಖ್ಯಮಂತ್ರಿ ಆದಂದಿನಿಂದ ಬಹುಸಂಖ್ಯಾತ ಪ್ರಬಲ ಜಾತಿಯ ರೆಡ್ಡಿಗಳು ಅಸಹನೆಯಿಂದ ಕಾಲೆಳಿಯುವ ಕೆಲಸದಲ್ಲಿ ನಿರತರಾಗಿದ್ದಾರೆ.ಅದಕ್ಕಾಗಿ ದಿವಂಗತ ಮುಖ್ಯಮಂತ್ರಿ ರಾಜಶೇಖರರೆಡ್ಡಿ ಪುತ್ರ ಜಗನ್ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಅಲ್ಪ ಸಂಖ್ಯಾತ ರೆಡ್ಡಿ ಸಹೋದರರು ಬಹುಸಂಖ್ಯಾತ,ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ ಯೆಡಿಯುರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಹೋರಾಡುತ್ತಿದ್ದಾರೆ. ವಿಚಿತ್ರ ಅಂದರೆ ಗಣಿ ವ್ಯವಹಾರವನ್ನು ಆಂಧ್ರದಲ್ಲೂ  ನಡೆಸುತ್ತಿರುವ ಜನಾರ್ದನ ರೆಡ್ಡಿ ಮಾಡಿದ ಅಕ್ರಮ ವ್ಯವಹಾರಗಳ ಕಾರಣ ಆಂಧ್ರ ಸರ್ಕಾರ ನೋಟೀಸ್ ಜಾರಿಗೊಳಿಸಿದೆ.
ಇದಕ್ಕೆ ಕಾರಣವಾದರೂ ಏನು? ಇತ್ತೀಚಿಗೆ ಕರ್ನಾಟಕಕ್ಕೆ ಬಂದಿದ್ದ ರೋಸಯ್ಯ ಅವರಿಗೆ ಯಡಿಯೂರಪ್ಪ ಈ ಐಡಿಯಾ ಕೊಟ್ಟಿರಬಹುದೆಂದು ರೆಡ್ಡಿ ಬಳಗ ಅನುಮಾನಿಸುತ್ತಿದೆಯಂತೆ.ಆದರೆ ರಾಜಕೀಯ ಪಂಡಿತರೊಬ್ಬರ ಪ್ರಕಾರ,ಈ ರಾಜಕೀಯ ಬಿಕ್ಕಟ್ಟಿನ ಮೂಲ ರೆಡ್ಡಿಗಳ ವ್ಯಾಪಾರಿ ಲೆಕ್ಕಾಚಾರದಲ್ಲಿ ಅಡಗಿದೆ.ರಾಜಶೇಖರ ರೆಡ್ಡಿ ಬದುಕಿರುವವರೆಗೆ ಆಂಧ್ರದಲ್ಲಿ ಸುಗಮವಾಗಿ ಗಣಿ ವ್ಯವಹಾರ ನಡೆಸುತ್ತಿದ್ದ ರೆಡ್ಡಿ ಸಹೋದರರಿಗೆ ರೋಸಯ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ.ಕರ್ನಾಟಕದಲ್ಲೂ ಯಡಿಯೂರಪ್ಪನವರು ಕಿರಿಕಿರಿ ಶುರು ಮಾಡಿದ್ದಾರೆ. ಹೀಗಾಗಿ ಎರಡೂ ಕಡೆ ಭೂಮಿಗೆ ಕನ್ನ ಹಾಕುವ ಕಳ್ಳ ಕಾಯಕವನ್ನು ಮುಂದುವರಿಸುವ ಸಲುವಾಗಿ ರೆಡ್ಡಿ ಸಹೋದರರಿಗೆ ಎರಡೂ ರಾಜ್ಯಗಳಲ್ಲಿ ತಮಗೆ ಅನುಕೂಲಕರವಾಗಿರುವ ಸರ್ಕಾರ ಬೇಕು.ಹೀಗಾಗಿ ಅವರು ಕಾಂಗ್ರೆಸ್ ಪಕ್ಷದ ಜತೆ ಚೌಕಾಸಿ ವ್ಯಾಪಾರ ಶುರು ಮಾಡಿದ್ದಾರೆ.ಆಂಧ್ರದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿರಬೇಕು,ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಪತನವಾಗಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕ್ಕೆ ಬರಬೇಕು.ಇದು ರೆಡ್ಡಿ ಸಹೋದದರರು ಕಾಂಗ್ರೆಸ್ ವರಿಷ್ಟರ ತಲೆಗೆ ತುಂಬಿರುವ ವಿಚಾರ.

ರೆಡ್ಡಿ ಸಹೋದರರ ಈ ಲೆಕ್ಕಾಚಾರ ಈಗಲೇ ಈಡೇರುವುದು ಸಾಧ್ಯವಿಲ್ಲದಿರಬಹುದು.ಅಡಿಪಾಯವಂತೂ ಹಾಕಿದ್ದಾರೆ.ಈಗ ಬಿಜೆಪಿ ವರಿಷ್ಟರು ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲವೆಂದು ಹೇಳಿರುವಾಗ ರೆಡ್ಡಿ ಸಹೋದರರು ಏನು ಮಾಡುತ್ತಾರೆ? ತಮ್ಮ ಲೆಕ್ಕಾಚಾರದಂತೆ ಸರ್ಕಾರದ ಪತನಕ್ಕೆ ಕಾರ್ಯ ತಂತ್ರ ರೂಪಿಸುತ್ತಾರೆ ಅಥವಾ ಸಕಾಲಕ್ಕೆ ಕಾಯುತ್ತಾರೆ.ಈಗ  ವರಿಷ್ಟರ ಮಾತಿನಿಂದ ಬೆಚ್ಚಿ ಬಿದ್ದಿರುವ ಸಾಕಷ್ಟು ಅವಕಾಶವಾದಿ ಶಾಸಕರಂತೂ ಮತ್ತೆ ಯೆಡಿಯೂರಪ್ಪ ಮುಂದೆ ಹಲ್ಲು ಕಿರಿಯಲು ಆರಂಭಿಸುತ್ತಾರೆ.ಇಂಥ ಸಂದರ್ಭದಲ್ಲಿ ಸಂಖ್ಯಾಬಲವಿಲ್ಲದ ರೆಡ್ಡಿಗಳು ಹೊಸ ಹೂಟ ಹೂಡ ಲೆಬೇಕಾಗುತ್ತದೆ.           

ಭಾನುವಾರ, ನವೆಂಬರ್ 1, 2009

ಜಗದೀಶ್ ಶೆಟ್ಟರ್ ಮತ್ತು ಭಿನ್ನರ ಬಳಗ

ರಾಜ್ಯ ವಿಧಾನ ಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ಸಜ್ಜನರು,ಸುಸಂಸ್ಕೃತ ರಾಜಕೀಯ ಕುಟುಂಬದಿಂದ ಬಂದವರು. ಈಗ ಅವರ ಹೆಸರೂ ಸುದ್ದಿಯಲ್ಲಿದೆ.ವಿಧಾನಸಭಾಧ್ಯಕ್ಷರಾಗಿ ಅವರು ಕೈಗೊಂಡ ನಿರ್ಧಾರಗಳು ಇದಕ್ಕೆ ಕಾರಣವಲ್ಲ.ಮುಂದಿನ ಮುಖ್ಯಮಂತ್ರಿಯಾಗಿ ಅವರನ್ನು ಆಯ್ಕೆ ಮಾಡಬೇಕೆಂದು ರೆಡ್ಡಿ ಸಹೋದರರು ಶೆಟ್ಟರ್ ಹೆಸರನ್ನು ಚಲಾವಣೆಗೆ ತಂದ ಕಾರಣ ಎಲ್ಲರ ಗಮನ ಅವರ ಮೇಲಿದೆ.

ರೆಡ್ಡಿಗಳು ಶೆಟ್ಟರ್ ಹೆಸರನ್ನು ತುಂಬ ಪ್ರೀತಿಯಿಂದ ಆಯ್ಕೆ ಮಾಡಿದ್ದಾರೆಂದು ಹೇಳಲು ಸಕಾರಣಗಳಿಲ್ಲ. ವಿವಿಧ ರಾಜಕೀಯ ಕಾರಣಗಳು ಸೇರಿದಂತೆ ಯೆಡಿಯೂರಪ್ಪ ಮುಖ್ಯ ಮಂತ್ರಿ ಆಗುತ್ಥರೆಂಬ ನಿರೀಕ್ಷೆಯಿಂದ ಲಿಂಗಾಯತ ಸಮುದಾಯ ನೀಡಿದ ಬೆಂಬಲ ಬಿಜೆಪಿ ಸರ್ಕಾರ ರಚನೆಗೆ ನೆರವಾಗಿತ್ತು.ಹೀಗಾಗಿ ಲಿಂಗಾಯತರ ಕೋಪ ಎದುರಿಸಬೆಕಾದೀತೆಂಬ ಭಯದಿಂದ ರೆಡ್ಡಿ ಸಹೋದರರು ಶೆಟ್ಟರ್ ಹೆಸರನ್ನು ಮುಂದಿಟ್ಟರು. ಇದೆ ಗಣಿ ದಣಿಗಳು ಹಿಂದೊಮ್ಮೆ ಬಂಡಾಯ ಎದ್ದಾಗ ಮುಂದಿನ ಮುಖ್ಯಮಂತ್ರಿ ಶ್ರೀರಾಮುಲು ಎಂದು ಘೋಷಿಸಿದ್ದರು.ಆದರೆ ಈಗ ರಾಮುಲು ಹೆಸರನ್ನು ಕೈಬಿಟ್ಟಿದ್ದು ಇದೆ ಕಾರಣಕ್ಕೆ.

ಶೆಟ್ಟರ್ ಅವರಿಗೆ ಮಂತ್ಹ್ರಿಯಾಗಬೇಕೆಂಬ ಆಸೆಯೇನೋ ಇತ್ತು. ಸ್ಪೀಕರ್ ಸ್ಥಾನಕ್ಕಿಂತ ಸಚಿವ ಸ್ಥಾನದತ್ತ  ರಾಜಕಾರಣಿಗಳಿಗೆ ಹೆಚ್ಚಿನ  ಆಕರ್ಷಣೆ.ಶೆಟ್ಟರ್ ಸಹ ಇದಕ್ಕಿಂತ ಭಿನ್ನವಾಗಿ ಯೋಚಿಸಿರಲು ಸಾಧ್ಯವಿಲ್ಲ್ಲ.ಆದರೆ ಯಡಿಯೂರಪ್ಪನವರು ಶೆಟ್ಟರ್ ಅವರನ್ನು ಮಂತ್ರಿ ಮಾಡುವ ಬದಲು ಸ್ಪೀಕರ್ ಆಗಿಸಿದರು. ಹಾಗೆ ಧಾರವಾಡ ಕಡೆಯಿಂದ ಇನ್ಯಾರನ್ನೋ ಮಂತ್ರಿ ಮಾಡಿದರು. ಶೆಟ್ಟರ್ ಮುಂದೊಂದು ದಿನ ತಮ್ಮ ಸ್ಥಾನಕ್ಕೆ ಸ್ಪರ್ಧಿಯಾದಾರೆಂಬ ಭಯವೂ ಯಡಿಯೂರಪ್ಪನವರನ್ನು ಕಾಡಿರಬಹುದು. ಇದಕ್ಕೆ ಕಾರಣವೂ ಇದೆ. ಇತಿಹಾಸ ಮರುಕಳಿಸಿದೆ. ಹಿಂದೊಮ್ಮೆ ಯಡಿಯೂರಪ್ಪನವರು ಸೋತು ಸಕಲೇಶಪುರದ ಬಿ.ಬಿ.ಶಿವಪ್ಪನವರು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಆಗಬೇಕಿದ್ದಾಗ ಯಡಿಯೂರಪ್ಪನವರು ಆಗ ಅಷ್ಟೇನೂ ಹೆಸರು ಮಾಡಿರದ ಶೆಟ್ಟರ್ ಅವರನ್ನು ವಿಪಕ್ಷ ನಾಯಕರಾಗುವಂತೆ ಮಾಡಿದ್ದರು. ಯಡಿಯೂರಪಪನವರಿಗಿಂತ ಮುಂಚೆ ಪಕ್ಷ ಕಟ್ಟುವಲ್ಲಿ ಶಿವಪ್ಪ ಮಹತ್ವದ ಪಾತ್ರ ವಹಿಸಿದ್ದರು.ಎ.ಕೆ.ಸುಬ್ಬಯ್ಯ ಅವರನ್ನು ಪಕ್ಷದಿಂದ ಹೊರ ಹಾಕಿದ ನಂತರ ಮುಂದೊಂದು ದಿನ ಬಿಜೆಪಿ ಸರ್ಕಾರ ಬಂದರೆ ಶಿವಪ್ಪನವರೆ ಮುಖ್ಯಮಂತ್ರಿ ಆಗುತ್ತರೆಂಬ ಮಾತುಗಳೂ ಇದ್ದವು.ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು ಶಿವಪ್ಪನವರನ್ನು ಮೂಲೆಗುಂಪು ಮಾಡುವ ತಂತ್ರ ರೂಪಿಸಿ ಯಶಸ್ಸು ಗಳಿಸಿದ್ದರು.ಈಗ ಯಡಿಯೂರಪ್ಪನವರಿಗೆ ಅದೆಲ್ಲಾ ನೆನಪಾಗುತ್ತಿರಬಹುದು.

ಈ ಎಲ್ಲ ಕಾರಣಗಳಿದ್ದರೂ ಶೆಟ್ಟರ್ ಎಚ್ಚರ ವಹಿಸಬೇಕಾಗಿದೆ. ಅವರು ರೆಡ್ಡಿ ಸಹೋದರರ ಬಲೆಗೆ ಬೀಳದೆ ಮೌನಕ್ಕೆ ಶರಣಾಗುವುದು ಒಳಿತು.  

ಗಣಿ ದಣಿಗಳ ಆಟ ;ಯಡಿಯೂರಿಗೆ ಪ್ರಾಣ ಸಂಕಟ

ಕಳೆದ ಒಂದು ವರ್ಷದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಸೊನ್ನೆ ಇರಬಹುದು.ಈ ಕಾರಣಕ್ಕೆ ಸರ್ಕಾರ ಇಳಿಯಬೇಕು ,ಯಡಿಯೂರಪ್ಪ ರಾಜಿನಾಮೆ ಕೊಡಬೇಕು .ಇದರಲ್ಲಿ ಎರಡನೇ ಮಾತಿಲ್ಲ .ಆದರೆ ಗಣಿ ದಣಿಗಳ ಒತ್ತಡಕ್ಕೆ, ಆರ್ಭಟಕ್ಕೆ ಮಣಿದು ಯಾಕಾದರೂ ರಾಜಿನಾಮೆ ಕೊಡಬೇಕು?

ದಿವಂಗತ ಪ್ರಧಾನಿ ಇಂದಿರಾ ಗಾಂಧೀ ಸೃಷ್ಟಿಸಿದ ಬಿಂದ್ರನ್ವಾಲೆ ಭೂತಕ್ಕೆ ಸ್ವತಃ ತಾವೇ ಬಲಿಯಾದರು. ಈಗ ಯಡಿಯೂರಪ್ಪ ಪರಿಚಯಿಸಿದ ಗಣಿ ದಣಿಗಳು ಮುಖ್ಯಮಂತ್ರಿ ಕುರ್ಚಿಯನ್ನೇ ಅಲುಗಾಡಿಸುತ್ತಿದ್ದಾರೆ .ಇದಕ್ಕೆ ರೆಡ್ಡಿ ಬ್ರದರ್ಸ್ ಕೊಡುತ್ತಿರುವ ಕಾರಣವಾದರೂ ಏನು? ಅವರ್ಯಾರೂ ಯಡಿಯೂರಪ್ಪ ಜನಪರ ಕೆಲಸ ಮಾಡಿಲ್ಲ ಎಂದೇನೂ ಹೇಳುತ್ತಿಲ್ಲ . ತಮ್ಮನ್ನು ಕಡೆಗಣಿಸಿದ ಕಾರಣ ನಾಯಕತ್ವ ಬದಲಾಗಬೇಕೆಂದು ಅರಚುತ್ತಿದ್ದಾರೆ.ಅವರನ್ನು ಕಡೆಗಣಿಸಿರುವುದು ಅಂದರೆ ಏನರ್ಥ? ಅವರ ಮಾತಿಗೆ ಯಡಿಯೂರಪ್ಪ ಮಣೆ ಹಾಕುತ್ತಿಲ್ಲ ಅಷ್ಟೇ .ಯಾಕೆ ಯಡಿಯೂರಪ್ಪ ಅವರ ಮಾತಿಗೆ ಬೆಲೆ ಕೊಡಬೇಕು? ಆಪರೇಷನ್ ಕಮಲದ ಉಸ್ತುವಾರಿ ಹೊತ್ತಿದ್ದಕ್ಕೆ ಯಡಿಯೂರಿ ತಮ್ಮ ಋಣ ತೀರಿಸಬೇಕೆಂದು ರೆಡ್ಡಿಗಳು ಬಯಸುತ್ತಿದ್ದಾರೆ.ಆಗ ಯಡಿಯೂರಪ್ಪ ಮಾಡಿದ ತಪ್ಪಿಗೆ ಈಗ ಪ್ರಾಯಶ್ಚಿತ್ತ ಮಾಡಿಕೊಳಲೆಬೇಕಾದ ಆತಂಕ ಎದುರಿಸುತ್ತಿದ್ದಾರೆ.ಮಾಡಿದ ಕೆಲಸಕ್ಕೆ ಲಾಭ ನಿರೀಕ್ಷಿಸುವುದು ವ್ಯಾಪಾರಿಗಳ ಲಕ್ಷಣ.ಗಣಿ ಲಾರಿಗಳ ಮೇಲೆ ಸುಂಕ ವಿಧಿಸಿದ್ದು ,ಪ್ರಹಾವ ಸಂತ್ರಸ್ಥರಿಗೆ ಮನೆ ನಿರ್ಮಾಣದ ಉಸ್ತುವಾರಿಯನ್ನು ಸಂಸದ ರಾಜೀವ್ ಚಂದ್ರಶೇಖರ ಅವರಿಗೆ ವಹಿಸಿದ್ದು ಗಣಿ ದಣಿಗಳ ಕೋಪಕ್ಕೆ ಮುಖ್ಯ ಕಾರಣ. ಇವರ ವ್ಯಾಪಾರದ ಲಾಭ ನಷ್ಟದ ಲೆಕ್ಕಾಚಾರಕ್ಕೆ ಯಡಿಯೂರಿ ಯಾಕೆ ರಾಜಿನಾಮೆ ಕೊಡಬೇಕು?

ಇಲ್ಲಿ ಗಣಿ ದಣಿಗಳ ವ್ಯಾಪಾರಿ ಮನಸ್ಸು ಮಾತ್ರ ಕೆಲಸ ಮಾಡುತ್ತಿಲ್ಲ,ಪುರುಷ ಪ್ರಧಾನ ಮನಸ್ಸೂ ಅಸಹನೆ ವ್ಯಕ್ತಪಡಿಸುತ್ತಿದೆ. ಶೋಭಾ ಕರಂದ್ಲಾಜೆ ಎಂಬ ಹೆಣ್ಣು ಮಗಳು ಯಾರದೇ ಒತ್ಥಾಸೆಯಿಲ್ಲದೆ ಸ್ವಂತ ಶಕ್ತಿಯಿಂದ ಮೇಲೆ ಬಂದವರು. ರಾಜಕೀಯ ಅಂದ ಮೇಲೆ ಅಲ್ಪ ಸ್ವಲ್ಪ ತಪ್ಪೂ ಮಾಡಿರಬಹುದು.ಆದರೆ ಯಾವುದೇ ರಾಜಕೀಯ ಕುಟುಂಬಕ್ಕೆ ಸೇರದ ಶೋಭಾ ರಾಜಕೀಯವಾಗಿ ಬೆಳೆದಿರುವುದೇ ಒಂದು ಅಚ್ಚರಿಯ ಗಾಥೆ. ಮಂತ್ರಿಯಾದ ಆರಂಭದಲ್ಲಿ ಯಡಿಯೂರಪ್ಪ ಯಾಕಾದರೂ ಇವಳಿಗೆ ಮಂತ್ರಿ ಸ್ಥಾನ ಕೊಟ್ಟರೋ ಎಂದು ಗೊಣಗುತ್ತಿದ್ದವರೆಲ್ಲ ಬೆರಗಾಗುವಂತೆ ಜವಾಬ್ದಾರಿ ನಿಭಾಯಿಸಿದ ಶೋಭಾ ಉಳಿದ ಮಂತ್ಹ್ರಿಗಳಿಗಿಂತ ಸುದ್ದಿ ಮಾಡಿದ್ದು,ಹೆಸರು ಮಾಡಿದ್ದು ನಿಜ.ಇದು ಅಪರಾಧವೇ? ಉಳಿದ ಮಂತ್ರಿಗಳ ಖಾತೆಗಳಲ್ಲಿ ಶೋಭಾ ಮೂಗು ತೂರಿಸುತ್ತಿದ್ದರೆಂದು ಬಂಡಾಯ ಸಹೋದರಿ ಶಾಂತ ಆರೋಪಿಸುತ್ತಿದ್ದಾರಲ್ಲ? ಶೋಭಾ ಮೂಗು ತೂರಿಸುವಾಗ ಈ ಮಂತ್ರಿಗಳೆಲ್ಲ ಏನು ಮಾಡುತ್ತಿದ್ದರು? ಇವರಲ್ಲಿ ಯಾರಿಗೂ ಬೆನ್ನು ಮೂಳೆ ಇರಲಿಲ್ಲವೇ? ಇದೆಲ್ಲ ಕೇವಲ ನೆಪ ಮತ್ತು ಹೊಟ್ಟೆ ಉರಿ ಎಂದು ಗೊತ್ತಾಗುತ್ತದೆ.ಜತೆಗೆ ಶೋಭಾ ಪಡೆದ ಜನಪ್ರಿಯತೆಯಿಂದ ಬೆಚ್ಚಿ ಬಿದ್ದ ಈ ಮಂದಿ ಶೋಭಾ ಮುಂದೊಂದು ದಿನ ಯಡಿಯೂರಪ್ಪನವರ ಉತ್ತರಾಧಿಕಾರಿ ಆಗಿಬಿಡುತ್ತಾರೆಂಬ  ದುರಾಲೋಚನೆ ಈ ಕೆಂಗಣ್ಣಿಗೆ ಕಾರಣ.

ಯದಿಯೂರಪ್ಪನವರಲ್ಲಿ ನಿಜವಾದ ನಾಯಕನ ಲಕ್ಷಣ ಇದ್ದಿದ್ದರೆ ಪರಿಸ್ತಿತಿ ಇಷ್ಟು ಬಿಗಡಾಯಿಸುತ್ತಿರಲಿಲ್ಲ. ತಮ್ಮ ಪಕ್ಷದ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು , ಎಲ್ಲರ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡಿದ್ದರೆ ಅವರೆಲ್ಲ ಇಂದು ಯಡಿಯೂರಿಯ ಬೆನ್ನ ಹಿಂದೆ ನಿಂತಿರುತ್ತಿದ್ದರು.ಯಡಿಯೂರಿ ಯಾವುದೇ ಆತಂಕ ಇಲ್ಲದೆ ಇವತ್ತು ಪರಿಸ್ಥಿತಿ ಎದುರಿಸಬಹುದಿತ್ತು. ಇನ್ನಾದರೂ ಯಡಿಯೂರಿ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಹಂಕಾರ ಪ್ರದರ್ಶಿಸದೆ ನಾಡಿನ ನಿಜ ನಾಯಕನಾಗಿ ರೂಪುಗೊಳ್ಳಬೇಕು. ಈ ಮಧ್ಯೆ ವಿಪಕ್ಷ ಕಾಂಗ್ರೆಸ್ ಅಥವಾ ಜೆ.ಡಿ.ಎಸ್ . ಸಂದರ್ಭದ ದುರ್ಲಾಭ ಪಡೆಯದೆ ಸದ್ಯಕ್ಕೆ ಮೌನಕ್ಕೆ ಶರಣಾಗುವುದು ಒಳಿತು. ರೆಡ್ಡಿಗಳ ಕಾರಣಕ್ಕೆ ಸರ್ಕಾರ ಬೀಳುವುದನ್ನು ವಿರೋಧಿಗಳು ನಿರೀಕ್ಷಿಸಬಾರದು. ಸರ್ಕಾರ ಉರುಳಿಸಲು ಸಕಾರಣಗಳಿಗಾಗಿ ಕಾಯಬೇಕು. ಇಲ್ಲವಾದರೆ ಇದು ಗಣಿ ದಣಿಗಳ ಗೆಲುವಾಗಿ ವ್ಯಾಪಾರಿಗಳ ಬ್ಲಾಕ್ ಮೇಲ್ ರಾಜಕಾರಣ ಮೇಲುಗೈ ಸಾಧಿಸಿ ನಿರಾತಂಕವಾಗಿ ಮುಂದುವರಿಯುತ್ತದೆ,ಎಲ್ಲ ರಾಜಕೀಯ ಪಕ್ಷಗಳನ್ನು ಬಲಿ ತೆಗೆದುಕೊಂಡು ಪ್ರಜಾಸತ್ತೆಗೆ ಮಾರಕವಾಗಿ ಬಲಿಯುತ್ತಾರೆ.

ಬೆಂಬಲಿಗರು

renukacharya avarannu mantri maadiddu sariye?

ಈ ಗ್ಯಾಜೆಟ್‌ನಲ್ಲಿ ದೋಷವಿದೆ