ಬುಧವಾರ, ನವೆಂಬರ್ 11, 2009

ಶೋಭಾಹೀನ ಸರ್ಕಾರ

ದೆಹಲಿಯ ಎಲ್ಲ ಬಿಜೆಪಿ ದಣಿಗಳು ವಿಫಲರಾದ ನಂತರ ಸುಷ್ಮಾ ಸ್ವರಾಜ್ ಎಂಬ ನಾಯಕಿ ಯಡಿಯೂರಿ ಮತ್ತು ರೆಡ್ಡಿ ಸಹೋದರರ ನಡುವೆ ಸಂಧಾನ ರೊಪಿಸುವಲ್ಲಿ ಯಶಸ್ವಿಯಾದರೆಂದು ಎಲ್ಲ ಮಾಧ್ಯಮಗಳು ಬಿಂಬಿಸಿದವು.ಸಂಧಾನ ಎಂದರೆ ಏನರ್ಥ? ಕೊಡು ಕೊಳ್ಳುವುದು ಬಿಟ್ಟರೆ ಬೇರೇನಲ್ಲ. ಆದರೆ ಯಡಿಯೂರಿ ಕೊಟ್ಟಿದ್ದು ಬಿಟ್ಟರೆ ಕೊಂಡಿದ್ದಾದರೂ ಏನು? ಮುಖ್ಯಮಂತ್ರಿ ಎಂಬ ಯಾವುದೇ ಅಧಿಕಾರ ಇಲ್ಲದ ಹಣೆಪಟ್ಟಿ ಉಳಿಸಿಕೊಂಡಿದ್ದು ಬಿಟ್ಟರೆ ಮತ್ತೇನಿಲ್ಲ. ಯಡಿಯೂರಿ ತಮ್ಮ ಪ್ರಧಾನ ಕಾರ್ಯದರ್ಶಿ ಬಳಿಗಾರ್ ಅವರನ್ನು ವರ್ಗಾ ಮಾಡಿದರು,ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಬಯಸಿದ ಅಧಿಕಾರಿಗಳನ್ನು ಅವರ ಜಿಲ್ಲೆಗಳಿಗೆ ಮತ್ತೆ ವರ್ಗಾ ಮಾಡಿದರು.
ದೆಹಲಿಯಿಂದ ವಾಪಸಾದ ರಾತ್ರಿ ಮಂತ್ರಿಮಂಡಲದಿಂದ ಯಾರನ್ನೂ ಕೈ ಬಿಡುವುದಿಲ್ಲ ಎಂದು ಯಡಿಯೂರಿ ವೀರಾವೇಶದಿಂದ ಹೇಳಿದರಾದರೂ ಮಾರನೆ ದಿನ ಬೆಳಿಗ್ಗೆಯೇ ಶೋಭಾರಿಂದ ರಾಜಿನಾಮೆ ಪಡೆದು ಅಂಗೀಕರಿಸಿಯೂಬಿಟ್ಟರು.ಸುಷ್ಮಾ ಸ್ವರಾಜ್ ಬಿಜೆಪಿಯ ಮಹಿಳಾ ಮುಖವಾಗಿದ್ದು ಕರ್ನಾಟಕದಲ್ಲಿ ಸ್ವಂತ ಶಕ್ತಿಯಿಂದ ಬೆಳೆಯುತ್ತಿರುವ ಶೋಭಾ ಅವರನ್ನು ಬಳಿ ಪಶು ಮಾಡಿದ್ದಾದರೂ ಯಾಕೆ? ಸುಷ್ಮಾ ಸ್ವತಃ ಶೋಭಾ ರಕ್ಷಣೆಗೆ ಮುಂದಾಗಬೇಕಿತ್ತು. ಅದು ಬಿಟ್ಟು ಶೋಭಾಗೆ ಮಂತ್ರಿಮಂಡಲದಿಂದ ಸೆಂಡ್ ಆಪ್ಹ್ ನೀಡಲು ಒಪ್ಪಿಗೆ ಕೊಟ್ಟಿದ್ದಾದರೂ ಯಾಕೆ?
ಸುಷ್ಮಾಗೆ ಶೋಭಾ ಅಪರಿಚಿತರೇನಲ್ಲ. ಸುಷ್ಮಾ ಬಳ್ಳಾರಿಯಲ್ಲಿ ಚುನಾವಣೆಗೆ ನಿಂತಾಗ ಶೋಭಾ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿದ್ದ ರು. ರಾಜಕೀಯ ಕುಟುಂಬದ ಹಿನ್ನೆಲೆಯೇ ಇಲ್ಲದ ಶೋಭಾಗಿಂತ ರೆಡ್ಡಿ ಸಹೋದರರ ಪಕ್ಷಪಾತಿಯಾಗಿ ಸುಷ್ಮಾ ನಿಂತಿದ್ದರೆಂದರೆ ರೆಡ್ಡಿಗಳು ಅದ್ಯಾವ ರೀತಿಯಲ್ಲಿ ಸುಷ್ಮಾಗೆ ಪ್ರಸಾದ ನೀಡಿರಬಹುದು?
ಇಷ್ಟೆಲ್ಲಾ ಆಗುತ್ತಿದ್ದರೂ ಯಡಿಯೂರಿ ಮಾತ್ರ ರಾಜ್ಯವನ್ನು ಯಾರಿಗೂ ಒತ್ತೆ ಇಟ್ಟಿಲ್ಲ,ಯಾರಿಗೂ ಬೆದರುವುದಿಲ್ಲ,ಶೋಭಾ ಯಾವ ತಪ್ಪು ಮಾಡದಿದ್ದರೂ,ಸಚಿವರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರನ್ನು ಕೈ ಬಿಡಬೇಕಾಯಿತು,ರಾಜಕೀಯದಲ್ಲಿ ಕೆಲವೊಮ್ಮೆ ಪ್ರಾಮಾಣಿಕತೆಗೆ,ಕ್ರಿಯಾಶೀಲತೆಗೆ ಬೆಲೆ ಸಿಗುವುದಿಲ್ಲ ಎಂದು ಬಡಬಡಿಸುತ್ತಿದ್ದಾರೆ. ಅವರನ್ನು ನೋಡಿದರೆ ನಗು ಬರುತ್ತದೆ.ಅಷ್ಟೇ ಅಲ್ಲ ಕರುನಾಡ ಇತಿಹಾಸದಲ್ಲಿ ಹಾಸ್ಯಾಸ್ಪದ ಮುಖ್ಯಮಂತ್ರಿಯೋಬ್ಬರಿದ್ದರೆಂದು ಭವಿಷ್ಯದಲ್ಲಿ ಹೇಳಲು ಒಳ್ಳೆ  ಉದಾಹಾರಣೆಯೂ   ದಾಖಲಾಗಿದೆ.ಸುಷ್ಮಾ ಸಂಧಾನದಿಂದ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದೂ ಮತ್ತೊಮ್ಮೆ ಸಾಬೀತಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Powered By Blogger

ಬೆಂಬಲಿಗರು

renukacharya avarannu mantri maadiddu sariye?