ಶನಿವಾರ, ನವೆಂಬರ್ 7, 2009

ಮುಖ್ಯಮಂತ್ರಿ ಕಣ್ಣೀರು



ಖಾಸಗಿ ಟಿವಿ ವಾಹಿನಿಯ ಸಂದರ್ಶನವೊಂದರಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಣ್ಣೀರಿಟ್ಟರು.ತಮ್ಮನ್ನು ನಂಬಿದವರನ್ನೇ ಕೈ ಬಿಡಬೇಕಾದ ಪರಿಸ್ಥಿತಿ ಬಂದಿದ್ದಕ್ಕೆ ದೇವರು ತಮ್ಮನ್ನು ಕ್ಷಮಿಸಬೇಕೆಂದು ಬೇಡಿಕೊಂಡರು.ಪೂರ್ಣಾವಧಿ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಮೊರೆ ಇಟ್ಟರು.ಕೇವಲ ಅಧಿಕಾರಕ್ಕಾಗಿ,ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ತಾನು ಅಸಹಾಯಕನಾಗಿರುವ ಬಗ್ಗೆ ನೋವನುಭವಿಸುತ್ತಿರುವುದಾಗಿ ಹೇಳಿಕೊಂಡರು.  ಈ ದೃಶ್ಯ ನೋಡಿದ ನಾಡಿನ ಅಸಂಖ್ಯಾತ ಜನರು 'ಅಯ್ಯೋ' ಎಂದಿರಬಹುದು.ಆದರೆ ನಾಯಕನಾದವನು ಸಾರ್ವಜನಿಕವಾಗಿ  ಕಣ್ಣೀರಿಡುವುದು ಎಷ್ಟು ಸರಿ?

ನಾಯಕನಾದವನುಎಲ್ಲರನ್ನೂ ಜತೆಯಾಗಿ ಕರೆದೊಯ್ಯುವ ಜತೆಗೆ ಪ್ರಾಮಾಣಿಕತೆ,ಜಾತ್ಯಾತೀತತೆ,ದೂರದೃಷ್ಟಿ,ಕ್ರಿಯಾಶೀಲತೆ,ದಿಟ್ಟತನ,ನಾಡಿನ ಹಿತಕ್ಕಾಗಿ ಅಧಿಕಾರ ತ್ಯಾಗ ಮಾಡುವ ಛಾತಿಯನ್ನೂ ಹೊಂದಿರಬೇಕು. ನಿಜ ನಾಯಕನಿಗೆ ಅಧಿಕಾರದ ಅಮಲೂ ಇರುವುದಿಲ್ಲ, ವ್ಯಾಮೋಹವೂ ಇರುವುದಿಲ್ಲ.ಹಾಗಾದರೆ ಯಡಿಯೂರಪ್ಪನವರು ನಾಯಕರಲ್ಲವೇ? ಬಿಜೆಪಿಯಲ್ಲಿರುವ ಇತರರಿಗೆ
 ಹೋಲಿಸಿದರೆ  ಅವರು ಮಾಸ್ ಲೀಡರ್.ವಿರೋಧ ಪಕ್ಷದ ನಾಯಕನಾಗಿದ್ದಾಗ ಅವರು ಪ್ರದರ್ಶಿಸುತ್ತಿದ್ದ ಸಿಟ್ಟು,ಆಕ್ರೋಶ ತುಂಬಾ ಜನಪ್ರಿಯತೆ ಗಳಿಸಿತ್ತು. ಆದರೆ ಆ ಸಂದರ್ಭದಲ್ಲಿದ್ದ ಸರ್ಕಾರ  ಜನತೆಗೆ ಅನ್ಯಾಯ ಮಾಡುತ್ತಿದೆ ಎಂದು ಒಮ್ಮೆಯೂ ಅವರು ಕಣ್ಣೀರು ಇಟ್ಟಿರಲಿಲ್ಲ.ಅಧಿಕಾರ ಗದ್ದುಗೆಗೆ ಏರಬೇಕಾದ ಆತುರ,ಅಸಹನೆ,ಅಕ್ರೋಶ ಅವರಲ್ಲಿ ಇತ್ತೇ ಹೊರತು ಜನರಿಗಾಗಾಗಿ ಕಂಬನಿ ಮಿಡಿಯುವ ಹೃದಯ ಅವರಲ್ಲಿ ಇದ್ದಿರಲಾರದು ಎಂಬ ಅನುಮಾನ ಈಗ ಹುಟ್ಟಿದೆ .ಅಧಿಕಾರಕ್ಕೆ ಬಂದ ನಂತರ ಸುಪ್ತವಾಗಿದ್ದ ವ್ಯಾಮೋಹ , ಭಿನ್ನಮತ ಶುರುವಾದಾಗ 
ಅಸಹಾಯಕತೆಯಿಂದ ಕಣ್ಣೀರ ರೂಪ ಪಡೆಯಿತು.

ಶೋಭಾ ಕರಂದ್ಲಾಜೆ, ಬಳಿಗಾರ್ ನಿಯಮಬದ್ಧವಾಗಿ,ಅರ್ಥಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಯಡಿಯೂರಪ್ಪನವರಿಗೆ ಸಂಪೂರ್ಣ ವಿಶ್ವಾಸ ಇದ್ದಿದ್ದರೆ ರೆಡ್ಡಿಗಳ ಒತ್ತಡಕ್ಕೆ ಮಣಿಯಲೇಬೇಕಿರಲಿಲ್ಲ.ರೆಡ್ಡಿ ಸಹೋದರರು ವ್ಯಾಪಾರಿ ಕಾರಣಗಳಿಗಾಗಿ ಭಿನ್ನಮತ ಶುರು ಮಾಡಿದ್ದರೆ ಈ ಕುರಿತು ಪಕ್ಷದ ವರಿಷ್ಟರಿಗೆ ಮನವರಿಕೆ ಮಾಡಿ ಕರುಣಾಕರ,ಜನಾರ್ದನ ಮತ್ತು  ಶ್ರೀರಾಮುಲುವನ್ನು ಸಂಪುಟದಿಂದ ವಜಾ ಮಾಡಬೇಕಿತ್ತು.ಹಾಗೊಂದು ವೇಳೆ ರೆಡ್ಡಿ ಸಹೋದರರ ಪರವಾಗಿ ಸಾಕಷ್ಟು ಸಂಖ್ಯೆಯಲ್ಲಿ ಶಾಸಕರಿದ್ದು ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದ್ದರೆ ಯಡಿಯೂರಪ್ಪ ಹುತಾತ್ಮರಾಗಿಬಿಡುತ್ತಿದ್ದರು.ಜನಮಾನಸದಲ್ಲಿ ಒಳ್ಳೆ ಸ್ಥಾನ ಪಡೆಯುತ್ತಿದ್ದರು.ರೆಡ್ಡಿಗಳು ಖಳನಾಯಕರಂತೆ ವಿಕಾರವಾಗಿ ಕಾಣುತ್ತಿದ್ದರು.

ನಾಯಕನಾದವನು ಕಣ್ಣೀರಿಟ್ಟರೆ ಅವನ ಅನುಯಾಯಿಗಳು ಅತಂತ್ರ ಸ್ಥಿತಿ ಎದುರಿಸುತ್ತಾರೆ,ವ್ಯಾಪಾರಿ ಬುದ್ಧಿಯ ಪುಡಾರಿಗಳೇ  ನಾಯಕರೆಂಬ ಭ್ರಮೆಯ ಲೆಕ್ಕಾಚಾರದಲ್ಲಿ ತೊಡಗುತ್ತಾರೆ.ಯಡಿಯೂರಪ್ಪ ತರಹದವರು ದುರ್ಬಲರಾಗುತ್ತಾ ಹೋಗುತ್ತಾರೆ. ಕಣ್ಣೀರು ಫಲ ನೀಡುವುದಿಲ್ಲ,ಕೇವಲ ಅನುಕಂಪವನ್ನು ಸೃಷ್ಟಿಸುತ್ತದೆ,ಎಷ್ಟೋ ಸಲ ಇಂಥವರು ಹಾಸ್ಯಾಸ್ಪದರಾಗಿಬಿಡುತ್ತಾರೆ.ಈಗಲೂ ಅಷ್ಟೇ ಕಾಲ ಮಿಂಚಿಲ್ಲ.ಯಡಿಯೂರಪ್ಪ ದಿಟ್ಟತನ ಪ್ರದರ್ಶಿಸಿ ತಾನೂ ನಿಜ ನಾಯಕ ಎಂಬುದನ್ನು ಸಾಬೀತುಪಡಿಸಬೇಕು.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Powered By Blogger

ಬೆಂಬಲಿಗರು

renukacharya avarannu mantri maadiddu sariye?