ಭಾನುವಾರ, ನವೆಂಬರ್ 1, 2009

ಗಣಿ ದಣಿಗಳ ಆಟ ;ಯಡಿಯೂರಿಗೆ ಪ್ರಾಣ ಸಂಕಟ

ಕಳೆದ ಒಂದು ವರ್ಷದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಸೊನ್ನೆ ಇರಬಹುದು.ಈ ಕಾರಣಕ್ಕೆ ಸರ್ಕಾರ ಇಳಿಯಬೇಕು ,ಯಡಿಯೂರಪ್ಪ ರಾಜಿನಾಮೆ ಕೊಡಬೇಕು .ಇದರಲ್ಲಿ ಎರಡನೇ ಮಾತಿಲ್ಲ .ಆದರೆ ಗಣಿ ದಣಿಗಳ ಒತ್ತಡಕ್ಕೆ, ಆರ್ಭಟಕ್ಕೆ ಮಣಿದು ಯಾಕಾದರೂ ರಾಜಿನಾಮೆ ಕೊಡಬೇಕು?

ದಿವಂಗತ ಪ್ರಧಾನಿ ಇಂದಿರಾ ಗಾಂಧೀ ಸೃಷ್ಟಿಸಿದ ಬಿಂದ್ರನ್ವಾಲೆ ಭೂತಕ್ಕೆ ಸ್ವತಃ ತಾವೇ ಬಲಿಯಾದರು. ಈಗ ಯಡಿಯೂರಪ್ಪ ಪರಿಚಯಿಸಿದ ಗಣಿ ದಣಿಗಳು ಮುಖ್ಯಮಂತ್ರಿ ಕುರ್ಚಿಯನ್ನೇ ಅಲುಗಾಡಿಸುತ್ತಿದ್ದಾರೆ .ಇದಕ್ಕೆ ರೆಡ್ಡಿ ಬ್ರದರ್ಸ್ ಕೊಡುತ್ತಿರುವ ಕಾರಣವಾದರೂ ಏನು? ಅವರ್ಯಾರೂ ಯಡಿಯೂರಪ್ಪ ಜನಪರ ಕೆಲಸ ಮಾಡಿಲ್ಲ ಎಂದೇನೂ ಹೇಳುತ್ತಿಲ್ಲ . ತಮ್ಮನ್ನು ಕಡೆಗಣಿಸಿದ ಕಾರಣ ನಾಯಕತ್ವ ಬದಲಾಗಬೇಕೆಂದು ಅರಚುತ್ತಿದ್ದಾರೆ.ಅವರನ್ನು ಕಡೆಗಣಿಸಿರುವುದು ಅಂದರೆ ಏನರ್ಥ? ಅವರ ಮಾತಿಗೆ ಯಡಿಯೂರಪ್ಪ ಮಣೆ ಹಾಕುತ್ತಿಲ್ಲ ಅಷ್ಟೇ .ಯಾಕೆ ಯಡಿಯೂರಪ್ಪ ಅವರ ಮಾತಿಗೆ ಬೆಲೆ ಕೊಡಬೇಕು? ಆಪರೇಷನ್ ಕಮಲದ ಉಸ್ತುವಾರಿ ಹೊತ್ತಿದ್ದಕ್ಕೆ ಯಡಿಯೂರಿ ತಮ್ಮ ಋಣ ತೀರಿಸಬೇಕೆಂದು ರೆಡ್ಡಿಗಳು ಬಯಸುತ್ತಿದ್ದಾರೆ.ಆಗ ಯಡಿಯೂರಪ್ಪ ಮಾಡಿದ ತಪ್ಪಿಗೆ ಈಗ ಪ್ರಾಯಶ್ಚಿತ್ತ ಮಾಡಿಕೊಳಲೆಬೇಕಾದ ಆತಂಕ ಎದುರಿಸುತ್ತಿದ್ದಾರೆ.ಮಾಡಿದ ಕೆಲಸಕ್ಕೆ ಲಾಭ ನಿರೀಕ್ಷಿಸುವುದು ವ್ಯಾಪಾರಿಗಳ ಲಕ್ಷಣ.ಗಣಿ ಲಾರಿಗಳ ಮೇಲೆ ಸುಂಕ ವಿಧಿಸಿದ್ದು ,ಪ್ರಹಾವ ಸಂತ್ರಸ್ಥರಿಗೆ ಮನೆ ನಿರ್ಮಾಣದ ಉಸ್ತುವಾರಿಯನ್ನು ಸಂಸದ ರಾಜೀವ್ ಚಂದ್ರಶೇಖರ ಅವರಿಗೆ ವಹಿಸಿದ್ದು ಗಣಿ ದಣಿಗಳ ಕೋಪಕ್ಕೆ ಮುಖ್ಯ ಕಾರಣ. ಇವರ ವ್ಯಾಪಾರದ ಲಾಭ ನಷ್ಟದ ಲೆಕ್ಕಾಚಾರಕ್ಕೆ ಯಡಿಯೂರಿ ಯಾಕೆ ರಾಜಿನಾಮೆ ಕೊಡಬೇಕು?

ಇಲ್ಲಿ ಗಣಿ ದಣಿಗಳ ವ್ಯಾಪಾರಿ ಮನಸ್ಸು ಮಾತ್ರ ಕೆಲಸ ಮಾಡುತ್ತಿಲ್ಲ,ಪುರುಷ ಪ್ರಧಾನ ಮನಸ್ಸೂ ಅಸಹನೆ ವ್ಯಕ್ತಪಡಿಸುತ್ತಿದೆ. ಶೋಭಾ ಕರಂದ್ಲಾಜೆ ಎಂಬ ಹೆಣ್ಣು ಮಗಳು ಯಾರದೇ ಒತ್ಥಾಸೆಯಿಲ್ಲದೆ ಸ್ವಂತ ಶಕ್ತಿಯಿಂದ ಮೇಲೆ ಬಂದವರು. ರಾಜಕೀಯ ಅಂದ ಮೇಲೆ ಅಲ್ಪ ಸ್ವಲ್ಪ ತಪ್ಪೂ ಮಾಡಿರಬಹುದು.ಆದರೆ ಯಾವುದೇ ರಾಜಕೀಯ ಕುಟುಂಬಕ್ಕೆ ಸೇರದ ಶೋಭಾ ರಾಜಕೀಯವಾಗಿ ಬೆಳೆದಿರುವುದೇ ಒಂದು ಅಚ್ಚರಿಯ ಗಾಥೆ. ಮಂತ್ರಿಯಾದ ಆರಂಭದಲ್ಲಿ ಯಡಿಯೂರಪ್ಪ ಯಾಕಾದರೂ ಇವಳಿಗೆ ಮಂತ್ರಿ ಸ್ಥಾನ ಕೊಟ್ಟರೋ ಎಂದು ಗೊಣಗುತ್ತಿದ್ದವರೆಲ್ಲ ಬೆರಗಾಗುವಂತೆ ಜವಾಬ್ದಾರಿ ನಿಭಾಯಿಸಿದ ಶೋಭಾ ಉಳಿದ ಮಂತ್ಹ್ರಿಗಳಿಗಿಂತ ಸುದ್ದಿ ಮಾಡಿದ್ದು,ಹೆಸರು ಮಾಡಿದ್ದು ನಿಜ.ಇದು ಅಪರಾಧವೇ? ಉಳಿದ ಮಂತ್ರಿಗಳ ಖಾತೆಗಳಲ್ಲಿ ಶೋಭಾ ಮೂಗು ತೂರಿಸುತ್ತಿದ್ದರೆಂದು ಬಂಡಾಯ ಸಹೋದರಿ ಶಾಂತ ಆರೋಪಿಸುತ್ತಿದ್ದಾರಲ್ಲ? ಶೋಭಾ ಮೂಗು ತೂರಿಸುವಾಗ ಈ ಮಂತ್ರಿಗಳೆಲ್ಲ ಏನು ಮಾಡುತ್ತಿದ್ದರು? ಇವರಲ್ಲಿ ಯಾರಿಗೂ ಬೆನ್ನು ಮೂಳೆ ಇರಲಿಲ್ಲವೇ? ಇದೆಲ್ಲ ಕೇವಲ ನೆಪ ಮತ್ತು ಹೊಟ್ಟೆ ಉರಿ ಎಂದು ಗೊತ್ತಾಗುತ್ತದೆ.ಜತೆಗೆ ಶೋಭಾ ಪಡೆದ ಜನಪ್ರಿಯತೆಯಿಂದ ಬೆಚ್ಚಿ ಬಿದ್ದ ಈ ಮಂದಿ ಶೋಭಾ ಮುಂದೊಂದು ದಿನ ಯಡಿಯೂರಪ್ಪನವರ ಉತ್ತರಾಧಿಕಾರಿ ಆಗಿಬಿಡುತ್ತಾರೆಂಬ  ದುರಾಲೋಚನೆ ಈ ಕೆಂಗಣ್ಣಿಗೆ ಕಾರಣ.

ಯದಿಯೂರಪ್ಪನವರಲ್ಲಿ ನಿಜವಾದ ನಾಯಕನ ಲಕ್ಷಣ ಇದ್ದಿದ್ದರೆ ಪರಿಸ್ತಿತಿ ಇಷ್ಟು ಬಿಗಡಾಯಿಸುತ್ತಿರಲಿಲ್ಲ. ತಮ್ಮ ಪಕ್ಷದ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು , ಎಲ್ಲರ ಹೆಗಲ ಮೇಲೆ ಕೈ ಹಾಕಿಕೊಂಡು ಓಡಾಡಿದ್ದರೆ ಅವರೆಲ್ಲ ಇಂದು ಯಡಿಯೂರಿಯ ಬೆನ್ನ ಹಿಂದೆ ನಿಂತಿರುತ್ತಿದ್ದರು.ಯಡಿಯೂರಿ ಯಾವುದೇ ಆತಂಕ ಇಲ್ಲದೆ ಇವತ್ತು ಪರಿಸ್ಥಿತಿ ಎದುರಿಸಬಹುದಿತ್ತು. ಇನ್ನಾದರೂ ಯಡಿಯೂರಿ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಹಂಕಾರ ಪ್ರದರ್ಶಿಸದೆ ನಾಡಿನ ನಿಜ ನಾಯಕನಾಗಿ ರೂಪುಗೊಳ್ಳಬೇಕು. ಈ ಮಧ್ಯೆ ವಿಪಕ್ಷ ಕಾಂಗ್ರೆಸ್ ಅಥವಾ ಜೆ.ಡಿ.ಎಸ್ . ಸಂದರ್ಭದ ದುರ್ಲಾಭ ಪಡೆಯದೆ ಸದ್ಯಕ್ಕೆ ಮೌನಕ್ಕೆ ಶರಣಾಗುವುದು ಒಳಿತು. ರೆಡ್ಡಿಗಳ ಕಾರಣಕ್ಕೆ ಸರ್ಕಾರ ಬೀಳುವುದನ್ನು ವಿರೋಧಿಗಳು ನಿರೀಕ್ಷಿಸಬಾರದು. ಸರ್ಕಾರ ಉರುಳಿಸಲು ಸಕಾರಣಗಳಿಗಾಗಿ ಕಾಯಬೇಕು. ಇಲ್ಲವಾದರೆ ಇದು ಗಣಿ ದಣಿಗಳ ಗೆಲುವಾಗಿ ವ್ಯಾಪಾರಿಗಳ ಬ್ಲಾಕ್ ಮೇಲ್ ರಾಜಕಾರಣ ಮೇಲುಗೈ ಸಾಧಿಸಿ ನಿರಾತಂಕವಾಗಿ ಮುಂದುವರಿಯುತ್ತದೆ,ಎಲ್ಲ ರಾಜಕೀಯ ಪಕ್ಷಗಳನ್ನು ಬಲಿ ತೆಗೆದುಕೊಂಡು ಪ್ರಜಾಸತ್ತೆಗೆ ಮಾರಕವಾಗಿ ಬಲಿಯುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Powered By Blogger

ಬೆಂಬಲಿಗರು

renukacharya avarannu mantri maadiddu sariye?