ಗುರುವಾರ, ಡಿಸೆಂಬರ್ 24, 2009

ಮಂತ್ರಿಗಳ ಆಯ್ಕೆ ಮತ್ತು ಅನೈತಿಕ ರಾಜಕಾರಣ

ಬೂ.ಸಿ.ಯಡಿಯೂರಪ್ಪ ಎಂಬ ನಿರ್ಲಜ್ಜ,ಅದಕ್ಷ,ಅಪ್ರಾಮಾಣಿಕ,ಹೊಣೆಗೇಡಿ ಮುಖ್ಯಮಂತ್ರಿಯ ಆಡಳಿತದಲ್ಲಿ ಬೇಕಾಬಿಟ್ಟಿ ಮನರಂಜನೆ ದೊರೆಯುತ್ತಿದೆ.ಅಧಿವೇಶನ,ಸಂಪುಟ ಸಭೆ,ಜನಪರ ಕಾರ್ಯಕ್ರಮಗಳಿಗಿಂತ ಸಚಿವ ಸಂಪುಟ ವಿಸ್ತರಣೆಗೆ ಮಾಜಿ ಹೋರಾಟಗಾರ,ಮಾಜಿ ಮನುಷ್ಯ,ಮಾಜಿ ನಾಯಕ ಯಡಿಯೂರಿ ಅಡಿಯೂರಲಾಗದ ಅಂಡು ಸುಟ್ಟ ಬೆಕ್ಕಿನಂತೆ ಅಧಿಕಾರ ಉಳಿಸಿಕೊಳ್ಳುವ ಮುಲಾಮಿಗಾಗಿ ಹುಡುಕುವ ಕಸುಬನ್ನು ನಿತ್ಯ ನಿರಂತರವಾಗಿಸಿಕೊಂಡಿದ್ದಾರೆ.ಅವರ ಬೇಜವಾಬ್ದಾರಿ ನಾಯಕತ್ವದಲ್ಲಿ ಪುಂಡು ಪೋಕರಿಗಳೆಲ್ಲ ಮಂತ್ರಿಗಳಾಗುವ ಸೌಭಾಗ್ಯ ಪಡೆಯುತ್ತಿದ್ದಾರೆ.

ನಿಜಕ್ಕೂ ಮಂತ್ರಿಗಳ ಆಯ್ಕೆ ಹೇಗೆ ನಡೆಯಬೇಕು?ನಮ್ಮ ನಾಡಿಗೆ ಎಂಥ ಮಂತ್ರಿಗಳು ಬೇಕು?ಸಂವಿಧಾನದ ನಿಯಮಾನುಸಾರ ಮಂತ್ರಿಗಳ ಆಯ್ಕೆ ನಡೆಯಬೇಕು.ಅಪರಾಧಗಳ ಹಿನ್ನೆಲೆ  ಇರುವವರು ಮಂತ್ರಿ ಸ್ಥಾನ ಪಡೆಯಲೇ ಬಾರದು. ಆದರೆ ಅಪರಾಧ ಹಿನ್ನೆಲೆ ಇಲ್ಲಾ ಎಂದಾಕ್ಷಣ ಎಲ್ಲರೂ ಮಂತ್ರಿಯಾಗಲು ಅರ್ಹರೆಂದು ಅರ್ಥವಲ್ಲ.ಪ್ರಾಮಾಣಿಕತೆ ,ದಕ್ಷತೆ ,ಕ್ರಿಯಾಶೀಲತೆ ,ದೂರದೃಷ್ಟಿ,ದಿಟ್ಟತನ ಇರುವ ಸರಳಸಜ್ಜನಿಕೆಯ ವ್ಯಕ್ತಿಗಳೇ ಮಂತ್ರಿಗಳಾಗಬೇಕು.ಮಂತ್ರಿಗಳನ್ನು  ಜಾತಿಬಲ,ಹಣಬಲ ಸೇರಿದಂತೆ ಎಲ್ಲ ಪ್ರಭಾವಗಳನ್ನು ಮೀರಿ ಆಯ್ಕೆ ಮಾಡಬೇಕು.ಈ ಮೊದಲು ನಾನು ಸೂಚಿಸಿದ ಗುಣ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳ ಆಯ್ಕೆಗೆ ಮನ್ನಣೆ ದೊರೆಯಬೇಕು.ಈ ನೆಲದಲ್ಲಿ  ಸುಖ,ಶಾಂತಿ, ನೆಮ್ಮದಿ,ಸಮೃದ್ಧಿ ಜತೆ ಸುಂದರ ಕನಸುಗಳನ್ನೂ ಕಾಣುವ ವಾತಾವರಣ ರೂಪಿಸುವ ಸಾಮರ್ಥ್ಯ ಇರುವವರಿಗೆ ಇಂಥ ಅವಕಾಶ ದೊರೆಯಬೇಕು.ಮಾತಿನ ಜಾಣ್ಮೆ ಇರುವವರೆಲ್ಲ ಅರ್ಹರಲ್ಲ,ಓಲೈಸುವ  ಗುಣ ಇರುವವರೆಲ್ಲ ನಾಯಕರಲ್ಲ ಎನ್ನುವ ಸ್ಪಷ್ಟ ಅರಿವು ಮುಖ್ಯಮಂತ್ರಿಗೆ ಇರಬೇಕು. ಇಲ್ಲದಿದ್ದರೆ ಆತ ಅನಾಯಕತ್ವದ ಅಪ್ಪಟ ಉದಾಹರಣೆಯಾಗಿ ಕಸದ ಬುಟ್ಟಿ ಸೇರುತ್ತಾನೆ. ಮಂತ್ರಿ ಸ್ಥಾನಕ್ಕೆ ಎಲ್ಲ ಅರ್ಹತೆಗಳಿರುವ ವ್ಯಕ್ತಿಗಳು ಒಂದೇ ಜಾತಿಗೆ ಸೇರಿದವರಾಗಿದ್ದರೂ ತಪ್ಪೇನಲ್ಲ.ಎಲ್ಲ ಮಂತ್ರಿಗಳು ದಲಿತ,ಒಕ್ಕಲಿಗ,ಲಿಂಗಾಯತ,ಕುರುಬ ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದರೂ ಅಥವಾ ಯಾವುದೊ ಹಿಂದುಳಿದ ಅತಿ ಸಣ್ಣ ಜಾತಿಗೆ ಸೇರಿದ್ದರೂ ಅದರಲ್ಲಿ ತಪ್ಪೇನಿಲ್ಲ.ಆದರೆ ಕೇವಲ ಜಾತಿ ಅಥವಾ ಕೋಮು ಅಥವಾ ಧನಬಲ ಅಥವಾ ಮತಾಧೀಷರ ಪ್ರಭಾವ ಅಥವಾ ಸ್ನಾಯುಬಲ ಇರುವ ಕಾರಣದಿಂದಲೇ ಯಾರನ್ನೇ ಮಂತ್ರಿಯಾಗಿಸುವುದು ತಪ್ಪಷ್ಟೇ ಅಲ್ಲ,ನಾಡಿನ ಜನತೆಗೆ ಬಗೆಯುವ ದ್ರೋಹವಾಗುತ್ತದೆ.ಪ್ರಬಲ,ಪ್ರಭಾವಿ,ದಲಿತ ಮತ್ತು ಅಲ್ಪಸಂಖ್ಯಾತರನ್ನು ಕೇವಲ ಓಟಿಗಾಗಿ ಓಲೈಸುವ ಸಲುವಾಗಿ ನಿಷ್ಕ್ರಿಯರು,ಮುಖಹೀನರು,ಅಪ್ರಾಮಾಣಿಕರು,ಅದಕ್ಷರು,ಭ್ರಷ್ಟರಿಗೆ ಮಣೆ ಹಾಕುವುದರಿಂದ ನಾಡಿನ ಜನರ ಕನಸುಗಳಷ್ಟೇ ಭಗ್ನಗೊಳ್ಳುವುದಿಲ್ಲ,ನಾಡನ್ನು ಶಿಲಾಯುಗಕ್ಕೆ ವಾಪಸು ಕರೆದೊಯ್ಯುವ ಅಪರಾಧವನ್ನೂ ಮಾಡಿದಂತಾಗುತ್ತದೆ.

ಈಗ ಆಗುತ್ತಿರುವುದೂ ಅದೇ. ಮಂತ್ರಿಗಳ ಆಯ್ಕೆಗೆ ಯಡಿಯೂರಪ್ಪನವರು ಅನುಸರಿಸಿರುವ ಮಾನದಂಡವಾದರೂ ಏನು? ಬಿಜೆಪಿ ಸರ್ಕಾರದ ಮಂತ್ರಿಮಂಡಲದಲ್ಲಿ ಪ್ರಬಲ ಜಾತಿಗೆ ಸೇರಿದ ಕಾರಣ ಲಿಂಗಾಯತರಿದ್ದಾರೆ,ಒಕ್ಕಲಿಗರಿದ್ದಾರೆ.ಪ್ರಭಾವಿ ಜಾತಿಗೆ ಸೇರಿದ ಬ್ರಾಹ್ಮಣರಿದ್ದಾರೆ,ಸಾಂವಿಧಾನಿಕ ರಕ್ಷಣೆ ಪಡೆದ ಕಾರಣ ದಲಿತರೂ ಇದ್ದಾರೆ,ತೋರಿಕೆಯ ಧರ್ಮ ಸಮನ್ವಯತೆಗಾಗಿ ಓರ್ವ ಮುಸ್ಲಿಮರಿಗೂ ಅವಕಾಶ ನೀಡಲಾಗಿದೆ.ಆದರೆ ವೋಟಿನ ಲೆಕ್ಕಾಚಾರದಲ್ಲಿ ಒಂದಿಷ್ಟೂ ನೆರವಾಗಲು ಸಾಧ್ಯವಾಗದ ಅತ್ಯಂತ ಸಣ್ಣ ಜಾತಿಗೆ ಸೇರಿದ ಒಬ್ಬರಾದರೂ ಸ್ಥಾನ ಪಡೆದಿದ್ದಾರೆಯೇ? ಖಂಡಿತ ಇಲ್ಲಾ! ಅದೇನೇ ಇರಲಿ,ಮಂತ್ರಿಗಳಾದವರಲ್ಲಿ ಎಷ್ಟು ಮಂದಿ ಗಟ್ಟಿಗರಿದ್ದಾರೆ? ಒಂದೊಂದು ಸಂಪುಟದಲ್ಲೂ ಮಹತ್ಸಾಧನೆ ಮಾಡಿದ ಗಟ್ಟಿಗರಿರುತ್ತಿದ್ದರು. ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬೋರ್ವೆಲ್ ತೋಡಿಸಿ ನೀರು ಸಾಬರೆಂದು ಹೆಸರು ಮಾಡಿದ ನಜೀರ್ ಸಾಬ್ ,ಹಸಿರು ಕಂಗೊಳಿಸುವಂತೆ ಮಾಡಿದ ಅರಣ್ಯ ಸಚಿವ ಜೀವಿಜಯರಂಥ ಅದೆಷ್ಟೋ ಮಂತ್ರಿಗಳಿದ್ದರು.ಹೆಗಡೆ ಅವಧಿಯಲ್ಲಿ ಮಂತ್ರಿಗಳೆಲ್ಲ ಸ್ವಾತಂತ್ರ್ಯದ ಖುಷಿ ಅನುಭವಿಸಿದ್ದರು.ಸಿದ್ದರಾಮಯ್ಯ ,ರಾಜಶೇಖರ ಮೂರ್ತಿ,ವೈ.ಕೆ.ರಾಮಯ್ಯ,ಮಾಲಕರೆಡ್ಡಿ,.......ಹೀಗೆ ಒಬ್ಬೊಬ್ಬರೂ ವಿಭಿನ್ನ ಕಾಲಘಟ್ಟಗಳಲ್ಲಿ ಮಂತ್ರಿಗಳಾಗಿ ಹೆಸರು ಮಾಡಿದ್ದಾರೆ.ಹಿಂದಿನ ಎಲ್ಲ ಸರ್ಕಾರಗಳಿಗಿಂತ ಭಿನ್ನ ಆಡಳಿತ ನೀಡುವುದಾಗಿ ಹೇಳಿ ಅಧಿಕಾ ರಕ್ಕೆ ಬಂದ ಬಿಜೆಪಿಯಲ್ಲಿ ಪರಿಶುದ್ಧರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿರಬೇಕಿತ್ತು.ಆದರೆ ಹಾಗಾಗಿದೆಯೇ? ಖಂಡಿತ ಇಲ್ಲಾ.ಯಡಿಯೂರಪ್ಪನವರ ಸಂಪುಟದಲ್ಲಿ ಸರಳತೆ,ಸಜ್ಜನಿಕೆ ಉಳಿಸಿಕೊಂಡು ಜನರ ನಡುವೆಯೇ ರಾಜಕಾರಣ ಮಾಡುತ್ತಿರುವ ಸುರೇಶ್ ಕುಮಾರ್ ಇರಬಹುದು,ಕೆಲವು ತಪ್ಪುಗಳ ನಡುವೆಯೂ ಭ್ರಷ್ಟರಾಗದ ಕಾಗೇರಿ ಇರಬಹುದು,ಗ್ರಾಮೀಣ ಮುಗ್ಧತೆ ಕಳೆದುಕೊಳ್ಳದ ಬೆಳಮಗಿ ಇರಬಹುದು,ಕನಸುಗಳಿರುವ ಅರವಿಂದ ಲಿಂಬಾವಳಿ ಇರಬಹುದು.ಉಳಿದವರು? ವಿ.ಎಸ್.ಆಚಾರ್ಯ ಸಭ್ಯರಂತೆ ಕಾಣುತ್ತಾರೆ.ಆದರೆ ಗೃಹ ಸಚಿವರಾಗಿ ವೈಫಲ್ಯಗಳ ಮೂಟೆಯೇ ಅವರ ಬೆನ್ನ ಮೇಲಿದೆ.ಅವರು ಸೂಪರ್ ಫ್ಲಾಪ್ ಎನ್ನುವುದಕ್ಕೆ ಸರ್ಕಾರ ರಚನೆಯಾದ ಆರಂಭದಲ್ಲೇ ನಡೆದ ಪದ್ಮಪ್ರಿಯ ನಿಗೂಢ ಸಾವಿನ ಪ್ರಕರಣದಲ್ಲಿ ಆಚಾರ್ಯರು ನಡೆದುಕೊಂಡ ರೀತಿಯೇ ಅವರು ದಿಟ್ಟರೂ ಅಲ್ಲ , ನಿಷ್ಪ್ರಯೋಜಕರ ಗುರು ಎನ್ನುವುದನ್ನೂ ಸಾಬೀತುಪಡಿಸಿಬಿಟ್ಟರು. ನಾವು ಮಾಡಿದ್ದೆ ಸರಿ ಎನ್ನುವ ಮುಖ್ಯಮಂತ್ರಿಗೆ ತಕ್ಕಂತೆ ಅವರ ಹೆಸರಿನ ಮುಂದಿರುವ ಇನಿಶಿಯಲ್ಸ್ we. yes. ಕೂಡಾ ಅದನ್ನೇ ಹೇಳುತ್ತದೆ.ಮುಸ್ಲಿಮರಿಗೊಂದು ಸ್ಥಾನ ಕೊಡಬೇಕು ಅನ್ನುವುದಕ್ಕಾಗಿ ಮುಮತಾಜ್ ಅಲಿ ಖಾನ್ ಅವರನ್ನು ಮಂತ್ರಿ ಮಾಡಿದ್ದಾರೆಂದೂ ಅನ್ನಿಸುವುದಿಲ್ಲ.ಮುಸ್ಲಿಂ ಹೆಸರಿನ ಹಿಂದೂ ಒಬ್ಬರನ್ನು ಮಂತ್ರಿ ಮಾಡಿದಂತೆ ಮುಮತಾಜ್ ವರ್ತಿಸುತ್ತಿದ್ದಾರೆ.ಸಂಘ ಪರಿವಾರವನ್ನು,ಯಡಿಯೂರಪ್ಪನವರನ್ನು ಒಲೈಸುವುದೇ ಮಂತ್ರಿಯ ಕೆಲಸ ಎಂದು  ಅವರು ಭಾವಿಸಿದಂತಿದೆ.ಸಂಘ ಪರಿವಾರದ ಚಿಂತನೆಗಳಿಗೆ ಹೊಂದಿಕೊಂಡು ಹೋಗುವುದೇ ನಿಜವಾದ ಮುಸ್ಲಿಮನ ಲಕ್ಷಣ ಎಂಬಂತೆ ಅವರು ನಟಿಸುತ್ತಿದ್ದಾರೆ.ಉದ್ದೇಶಿತ ಗೋ ಹತ್ಯೆ ನಿಷೇಧ ಕಾಯ್ದೆ,ಬಾಬ್ರಿ ಮಸೀದಿ ನೆಲಸಮ,ಬಾಬಾಬುಡನಗಿರಿ ವಿವಾದದ ಬಗ್ಗೆಯಾಗಲೀ ಅವರು ಅಪ್ಪಿ ತಪ್ಪಿ ತುಟಿ ತೆರೆಯುವುದಿಲ್ಲ.ಸಾಹಿತ್ಯ ಕ್ಷೇತ್ರದಲ್ಲಿ ನಿಸ್ಸಾರ್ ಅಹ್ಮದ್ (ಬೆಣ್ಣೆ ಕದ್ದ ನಮ್ಮ ಕೃಷ್ಣ ಖ್ಯಾತಿಯ) ಇದ್ದಂತೆ ರಾಜಕೀಯದಲ್ಲಿ ಮುಮತಾಜ್ ಅಲಿ ಖಾನ್!

ಇನ್ನು ಭ್ರಷ್ಟಾಚಾರ,ವಿವಾದಗಳ ವಿಚಾರದಲ್ಲಿ ಜನಾರ್ದನರೆಡ್ಡಿಯದಂತೂ ಲೋಡುಗಟ್ಟಲೆ ಸಂಗತಿಗಳಿವೆ.ಅದಿರಲಿ.ಸ್ವಂತ ಅಣ್ಣ ತಮ್ಮಂದಿರಾದ ಜನಾರ್ದನ ಮತ್ತು  ಕರುಣಾಕರ ಇಬ್ಬರನ್ನೂ ಮಂತ್ರಿ ಮಾಡುವ ಅಗತ್ಯವಾದರೂ ಏನಿತ್ತು?ಕಾಂಚಾಣ ಬಿಟ್ಟರೆ ಅವರಲ್ಲಿ ಮಂತ್ರಿಯಾಗಲೆಬೇಕಾದ ಅಂಥ ವಿಶೇಷ ಅರ್ಹತೆಯಾದರೂ ಏನಿತ್ತು? ಸುಧಾಕರ್ ಎಂಬ ಬ್ಯಾಂಕ್ ಕರ್ಮಕಾಂಡದ ಮನುಷ್ಯ,ಈ ಮೊದಲು ಮಂತ್ರಿಯಾಗಿದ್ದ ಕೃಷ್ಣಯ್ಯ ಶೆಟ್ಟಿ ಎಂಬಾತನ ಹಗರಣ..... ಒಂದೇ ಎರಡೇ?ಇನ್ನು ನಿಷ್ಪ್ರಯೋಜಕರು,ಅದಕ್ಷರಂತೂ ಹೇಳುವುದೇ ಬೇಡ,ಅನೇಕ ಸಚಿವರು ಈ ಸ್ಥಾನಕ್ಕಾಗಿ ಸ್ಪರ್ಧೆ ನಡೆಸುತ್ತಿದ್ದಾರೆ.ಹಾಗೆ ನೋಡಿದರೆ ಯಡಿಯೂರಪ್ಪನವರಿಗೆ ಆಪ್ತರೆಂಬ ಕಾರಣಕ್ಕೆ ಮಂತ್ರಿ ಸ್ಥಾನ ಪಡೆದರೆಂಬ ಮೂದಲಿಕೆ ಹೊತ್ತಿದ್ದ ಶೋಭಾ ಕರಂದ್ಲಾಜೆ ಎಲ್ಲರೂ ಅಚ್ಚರಿಗೊಳ್ಳುವಂತೆ ದಿಟ್ಟತನದಿಂದ,ಕ್ರಿಯಾಶೀಲತೆಯಿಂದ ಮಂತ್ರಿ ಸ್ಥಾನಕ್ಕೆ ಒಂದು ಮೆರಗು ತಂದು ಕೊಟ್ಟಿದ್ದರು.ಅಷ್ಟೇ ಅಲ್ಲ,ಶೋಭಾ ಅವರಿಗೆ ಗೃಹ ಖಾತೆ ಕೊಟ್ಟಿದ್ದರೂ ಸಮರ್ಥವಾಗಿ ನಿಭಾಯಿಸುತ್ತಿದ್ದರೇನೋ ಅನ್ನುವಂತೆ ಕೆಲಸ ಮಾಡುತ್ತಿದ್ದರು.ಬಹುಶ ಯಡಿಯೂರಿ ಸಂಪುಟದಲ್ಲಿದ್ದ ಏಕೈಕ ದಿಟ್ಟರೆಂದರೆ ಶೋಭಾ ಮಾತ್ರ ಅನ್ನಿಸುತ್ತದೆ. ಆದರೆ ಗಣಿ ಕಳ್ಳರಿಗೆ ಇಷ್ಟವಿಲ್ಲ ಎಂಬ ಒಂದೇ  ಕಾರಣಕ್ಕೆ ಶೋಭಾಗೆ ಕೈ ಕೊತ್ತರೆಂದ ಮೇಲೆ ಯಡಿಯೂರಿ ಅದೆಂಥ ನಾಯಕ?  ಈಗ ನೋಡಿದರೆ ನರ್ಸ್ ಜಯಲಕ್ಷ್ಮಿ ಪ್ರಕರಣದಿಂದ ಸುದ್ದಿ ಮಾಡಿದ್ದ ರೇಣುಕಾಚಾರ್ಯ ಎಂಬ ಆಸಾಮಿ ಅದೇನು ಮಾಡಿದರೋ?ಯಡಿಯೂರಪ್ಪ ಆ ಮನುಷ್ಯನಿಗೆ ಅದ್ಯಾಕೆ ಹೆದರಿದರೋ? ಆತನ ಬೆದರಿಕೆ ತಂತ್ರಕ್ಕೆ ಮಣಿದ ಯಡಿಯೂರಪ್ಪ  , ರೇಣುಕಾಚಾರ್ಯನನ್ನೂ ಮಂತ್ರಿ ಮಾಡಿಬಿಟ್ಟರು.ಆತ ಮಹಾನ್ ನಾಯಕನೂ ಆಗಿರಲಿಲ್ಲ,ನರ್ಸ್ ಜಯಲಕ್ಷ್ಮಿ ಪ್ರಕರಣ ಬಿಟ್ಟರೆ ಬೇರೆ ಯಾವುದೇ ಸಾಧನೆಯನ್ನೂ ಮಾಡಿರಲಿಲ್ಲ.ಅನೇಕ ಶಾಸಕರ ವಿರೋಧದ ನಡುವೆಯೂ ಆತನನ್ನು ಮಂತ್ರಿ ಮಾಡುವ ದಿಟ್ಟತನವನ್ನು ಯಡಿಯೂರಿ ಮೆರೆದರು.ಯಡಿಯೂರಪ್ಪನವರು ಎಡವುತ್ತಿರುವುದು ಇಲ್ಲೇ.ಜನಾರ್ದನರೆಡ್ಡಿ ಅಂಡ್ ಕೋ ಮೊದಲ ಸಲ ತಿರುಗಿ ಬಿದ್ದಾಗಲೇ ಆ ಗುಂಪಿನ ಎಲ್ಲ ಮಂತ್ರಿಗಳನ್ನು ವಜಾ ಮಾಡುವ ತಾಖತ್ತನ್ನು ಯಡಿಯೂರಪ್ಪ ಪ್ರದರ್ಶಿಸಬೇಕಿತ್ತು.ಯಾವುದೇ ಕಾರಣಕ್ಕೂ ಶೋಭಾ ಅವರಂಥ ಕ್ರಿಯಾಶೀಲರನ್ನು ಕೈ ಬಿಡುವುದಿಲ್ಲ ಎಂದು ಘೋಷಿಸಬೇಕಿತ್ತು.ಚತುರೋಪಾಯ ಮಾಡಿದರೂ ಅನರ್ಹರನ್ನು ಮಾತ್ರ ಮಂತ್ರಿ ಮಾಡುವುದಿಲ್ಲ ಎಂದು ದಿಟ್ಟತನ ತೋರಬೇಕಿತ್ತು.ಆದರೆ ಯಡಿಯೂರಪ್ಪನವರು ದಿಟ್ಟತನ ತೋರಬೇಕಾದ ಸಂದರ್ಭದಲ್ಲಿ ಹೇಡಿಯಂತೆ ತಲೆಬಾಗಿದರು,ಕನಿಷ್ಠ ರಾಜಿ ಮಾಡಿಕೊಳ್ಳಬೇಕಾದ ಕಡೆ ಮುಂಗೋಪ ತೋರಿದರು.ಕಾಲು ಹಿಡಿಯುವವರು ಕಾಲನ್ನೂ ಎಳೆಯಬಲ್ಲರೆಂಬ ಸತ್ಯವನ್ನು ಯಡಿಯೂರಿ ಮರೆತರು.ಈಗ ಕಾಲ ಮಿಂಚಿದೆ.ಮಾಡಿದ್ದುಣ್ಣೋ ಮಹಾರಾಯ ಎಂಬುದಕ್ಕೆ ಅತ್ತ್ಯುತ್ತಮ ಉದಾಹರಣೆಯಾಗಿ ಯಡಿಯೂರಪ್ಪ ವಿಧಿಯನ್ನು ಹಣಿಯುತ್ತಾ ಕಾಲ ಕಳೆಯಬೇಕಾಗಿದೆ.ಅಯ್ಯೋ ಪಾಪ!

1 ಕಾಮೆಂಟ್‌:

Powered By Blogger

ಬೆಂಬಲಿಗರು

renukacharya avarannu mantri maadiddu sariye?