![]() |
| ಸಿದ್ದಲಿಂಗಯ್ಯ |
ನನಗೂ ಸಿದ್ದಲಿಂಗಯ್ಯ ಅವರಿಗೆ ಸಂಬಂಧಿಸಿದಂತೆ ಕೆಲವು ತಕರಾರುಗಳಿವೆ. ಅದು ಈ ಮಹಾನ್ "ಜಾತ್ಯತೀತ" ವ್ಯಕ್ತಿಗಳ ಸ್ವಾರ್ಥ ಚಿಂತನೆ ಆಧರಿಸಿದ್ದಲ್ಲ. "ಗುಡಿಸಲುಗಳು ಗುಡುಗುತ್ತಿವೆ, ಬಂಗಲೆಗಳು ನಡುಗುತ್ತಿವೆ.." ಎಂದು ಸಾತ್ವಿಕ ಸಿಟ್ಟು ತೋರಿದ್ದ ಸಿದ್ದಲಿಂಗಯ್ಯ ಈ ಹಿಂದೆ ರಾಮಕೃಷ್ಣ ಹೆಗಡೆ ಮು.ಮಂ. ಆಗಿದ್ದಾಗ ಮೊದಲ ಸಲ ಎಂ.ಎಲ್.ಸಿ. ಆದಾಗ ನನಗೇನೂ ಆಕ್ಷೇಪ ಇರಲಿಲ್ಲ. ಆನಂತರ ಎರಡನೇ ಅವಧಿಗೂ ಇದೇ ಸ್ಥಾನವನ್ನು ಪಡೆದು ಮುಂದುವರಿದ ಬಗ್ಗೆ ನನಗೆ ಅಸಮಾಧಾನವಿತ್ತು. ಅದನ್ನು ನಾನು ಆಗಿದ್ದ ಲಂಕೇಶ್ ಪತ್ರಿಕೆಯಲ್ಲೇ ಬರೆದಿದ್ದೆ ಕೂಡಾ.ಅಷ್ಟಕ್ಕೂ ಸುಮ್ಮನಾಗದೆ ಕುಮಾರಸ್ವಾಮಿ ಮು.ಮಂ. ಆದಾಗ, ಯಡಿಯೂರಪ್ಪ ಮು.ಮಂ. ಆದಾಗ ಯಾವ್ಯಾವುದೋ ಪ್ರಾಧಿಕಾರದ ಅಧ್ಯಕ್ಷ ಸ್ಥಾನಗಳಲ್ಲಿ ಮುಂದುವರಿಯಲು ಅವರ ಊರು ಕೇರಿ ಆತ್ಮಕತೆಯನ್ನು ಈ ಜನವಿರೊಧಿ ನಾಯಕರಿಗೆ ಅರ್ಪಿಸಿದ್ದರ ಬಗ್ಗೆ ನನಗೆ ತುಂಬ ಸಿಟ್ಟಿದೆ.ಒಂದು ತಲೆಮಾರಿನ ಮೇಲೆ ಅಪಾರ ಪ್ರಭಾವ ಬೀರಿದ್ದ ಬರಹಗಾರನೊಬ್ಬ ಹೀಗಾಗಬಾರದಿತ್ತು ಅನ್ನುವ ನೋವು ಮತ್ತು ಸಿಟ್ಟು ಅದು. ಇಷ್ಟೆಲ್ಲದರ ನಡುವೆಯೂ ಅವರು ಮುಖವಾಡ ಹಾಕಿಕೊಂಡು ಬದುಕುತ್ತಿಲ್ಲ.ಅವರೊಳಗೆ ಇನ್ನೂ ಅಪ್ಪಟ ಮನುಷ್ಯ ಇನ್ನೂ ಉಳಿದಿದ್ದಾನೆ. ಅವರ ಹಾಸ್ಯ ಪ್ರಜ್ಞೆಗೆ ಕುಂದುಂಟಾಗಿಲ್ಲ. ಎಲ್ಲ ರಾಜಿಗಳ ನಡುವೆಯೂ ತಮ್ಮ ವಿಚಾರಧಾರೆಗಳನ್ನು ಮರೆತಿಲ್ಲ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ. ಇವತ್ತಿಗೂ ಸಿದ್ದಲಿಂಗಯ್ಯ ಅವರ ಜತೆ ಯಾವುದೇ ಸಾಮಾನ್ಯ ಮನುಷ್ಯನೊಬ್ಬ ಇವತ್ತಿಗೂ ಸಂಭಾಷಿಸುವುದು ಸಾಧ್ಯವಿದೆ.ಆದರೆ ಅವರ ಜತೆಯಲ್ಲೇ ಬೆಳೆದ ಎಷ್ಟೋ ಬರಹಗಾರರಿಗೆ ಈ ಸೌಜನ್ಯವೂ ಗೊತ್ತಿಲ್ಲ. ಈಗ ಪುಂಡಲೀಕ ಹಾಲಂಬಿ ಅವರು ಈ ನಿರ್ಧಾರ ಕೈಗೊಳ್ಳದೇ ಹೋಗಿದ್ದರೆ ಇನ್ನೆರಡು ಶತಮಾನವಾದರೂ ಈ ಗೌರವ ದಲಿತ ಸಮುದಾಯಕ್ಕೆ ಸೇರಿದ ಪ್ರತಿಭಾವಂತ ಬರಹಗಾರನೊಬ್ಬನಿಗೆ ಸಿಗುವುದು ಕಷ್ಟವಿತ್ತು. ಪ್ರತಿಭೆ ಅಂದರೆ ಮಾನದಂಡ ಏನು? ಒಂದೇ ಜಾತಿಗೆ ಸೇರಿದ ಆಯ್ಕೆಯೇ? ಪ್ರಭಾವಿಗಳು ಮತ್ತು ಪ್ರಬಲರನ್ನು ಮಾತ್ರ ಓಲೈಸುವ ಆಯ್ಕೆಯೇ?













