ಶನಿವಾರ, ನವೆಂಬರ್ 14, 2015

ನನ್ನ ಮಡಿಕೇರಿ ಅಳುತ್ತಿದೆ
ಯಾಕೆ ಗೊತ್ತಾ?
ಜಾತಿ, ಮತ, ಧರ್ಮಗಳೂ
ಖಾಸಗೀ ಕ್ರಿಯೆಯಾಗಿ
ಸಾಮರಸ್ಯದ ತವರಿನಂತಿದ್ದ
ಧ್ಯಾನ ಮೌನದ ಕಣಿವೆ
ಮಡಿಕೇರಿಯಲ್ಲೂ
ಲಾಠಿ, ಬೂಟು, ಬಂದೂಕಿನ ಸದ್ದು.
ರಾಜಾಸೀಟಿನ ಹೂದೋಟ
ಹಿಂದೊಮ್ಮೆ ಇಂಗ್ಲಿಷರ ಮಸಣ.
ಅಲ್ಲೀಗ ಗಹಗಹಿಸಿ ನಗುವ
"ಭೂತ"ಗಳು. 
ರಾಜರ
ಪಾರ್ಥಿವ ಶರೀರಗಳು
ಎದ್ದು ಕತ್ತಿ ಝಳಪಿಸುತ್ತಿವೆ
ಗದ್ದಿಗೆಯಲ್ಲಿ .
"ನಮ್ಮ ಗದ್ದಿಗೆಗಳನ್ನು ದುಸ್ಥಿತಿಗೆ 
ತಂದವರು ಯಾರು? 
ಎಲ್ಲಿಂದ ಬಂದವರು?
ನಮ್ಮರಮನೆಯನ್ನೇ ಸರ್ಕಾರಿ ಕಚೇರಿ
ಮಾಡಿದ ಧೂರ್ತರಾರು?"
ಲಿಂಗರಾಜ,ವೀರರಾಜರ ಪ್ರಶ್ನೆಗಳಿಗೆ
ಉತ್ತರ ಕೊಡುವವರಾರು?
ಓಂಕಾರೇಶ್ವರನ ಘಂಟಾನಾದದಲ್ಲೂ,
ಸಂತ ಮೈಖೇಲರ ಚರ್ಚಿನ ಪ್ರಾರ್ಥನೆಯಲ್ಲೂ
ಲಷ್ಕರ್ ಮಸೀದಿಯ ಬೆಳಗಿನ 
ಪ್ರಾರ್ಥನೆಯ ಕರೆ ಅಝಾದಲ್ಲೂ
ಕಣ್ಣೀರು ತೊಟ್ಟಿಕ್ಕಿದ ಸದ್ದು. 
ನನ್ನ ಮನೆಯ ಹೂದೋಟದಲ್ಲಿ
ಅರಳಿದ ಬಿಳಿ ಗುಲಾಬಿಯಲ್ಲೂ
ಒಸರುತ್ತಿದೆ ರಕ್ತ .
ಗಾಂಧಿ ಮಂಟಪದ
ಪ್ರತಿಮೆಯಲ್ಲೂ ಕಣ್ಣೀರು.
ಬೆಚ್ಚಿ ಬಿದ್ದಿದ್ದಾರೆ
ಮಲ್ಲಿಗೆ ಮನಸ್ಸಿನ ಮನುಜರು.
ಎಲ್ಲಿ ಹೋಯಿತು ಮಡಿಕೇರಿಯ
ಅಂಬರದಿ
ಬೆಳ್ಳಿ ಹೊದಿಕೆಯಂತಿದ್ದ ಮಂಜು?
ಅಲ್ಲಿ, ಇಲ್ಲಿ, ಎಲ್ಲ ಕಡೆ 
ಹುಡುಕಿದರೂ ನಂಜು. 
ಕಾಲು ನೆಕ್ಕುತ್ತಿದ್ದವರ
ನಾಲಗೆಗಳೇ ಕತ್ತಿ,ಬಂದೂಕು.
ನಮಗೆ ಪ್ರೀತಿ ಪಾಠ
ಬೋಧಿಸಿದ ಫಾದರ್ ಜೇಮ್ಸ್ ರಾವ್
ನೀವಾದರೂ ಎಲ್ಲಿದ್ದೀರಿ?
ನಿಮ್ಮ ಮನೆಯ ಪುಟ್ಟ ಕೊಳಕ್ಕೆ
ಬಿದ್ದಾಗ ನನ್ನನ್ನು ರಕ್ಷಿಸಿದ 
ಮೊಹ್ಮದನಾದರೂ ಎಲ್ಲಿದ್ದಾನೆ?
ದಸರೆಯ ಜನೋತ್ಸವದಲ್ಲಿ
ದುಸ್ರಾ ಮಾತನಾಡದೆ
ಮಂಟಪದ ಅಲಂಕಾರ ಮಾಡುತ್ತಿದ್ದ
ವಿಲಿಯಂ, ಜೇಮ್ಸ್ ,ರಫೀಕ್, ಅನ್ವರ್,
ಫಜುಲುಲ್ಲಾಗಳು ಎಲ್ಲಿದ್ದಾರೆ?
ಸಮನ್ವಯದ ಪರಮೋಚ್ಛ
ಉದಾಹರಣೆಗಳಂತಿದ್ದ
ಕೇಶವ,ಶಂಕರನಾರಾಯಣ,ಶಾಂಭಟ್
ಎಲ್ಲರೂ ಎಲ್ಲಿ ಮರೆಯಾಗಿದ್ದಾರೆ?
ದಸರಾ ಸಂಭ್ರಮದ ಡೋಲು
ಸದ್ದಿನ ನಡುವೆ
ತಮ್ಮವನೊಬ್ಬ ಕೊಲೆ{?}ಯಾದರೂ
ಕೆಂಗುಲಾಬಿ ಹಿಡಿದು ಸಹನೆ ಮೆರೆದವರೂ
ಅಳುವುದಕ್ಕೂ ಅನುಮತಿ 
ಬೇಕಾದೀತೆಂದು
ಗುಟ್ಟಾಗಿ ಅಳುತ್ತಿದ್ದಾರೆ.
ಪ್ರೀತಿ,ದಯೆ,ಕರುಣೆ
ಕಳೆದುಕೊಂಡಿರುವ ನಿಜ ಮನುಷ್ಯ
ಅಳಿವಿನಂಚಿನಲ್ಲಿರುವ ಜೀವಿಗಳ
ಪಟ್ಟಿಗೆ ಸೇರಿದ್ದಾನೆ.
ಅಂಥ ಒಬ್ಬನನ್ನಾದರೂ ಹುಡುಕಿಕೊಡಿ
ಮಡಿಕೇರಿಯ ಕಣ್ಣೀರೊರೆಸುವ
ಕೈಗಳು ಬೇಕು.
{ಮಡಿಕೇರಿಯ ರಾಜಾಸೀಟಿನಲ್ಲಿರುವ ಈಗಿನ ಉದ್ಯಾನ ಮೊದಲು ಇಂಗ್ಲಿಷರ ಸ್ಮಶಾನವಾಗಿತ್ತು. ನಾವು ಸೇಂಟ್ ಮೈಖೇಲ್ಸ್ ನಲ್ಲಿ ಓದುತ್ತಿದ್ದ ದಿನಗಳಲ್ಲಿ ಇಂಗ್ಲಿಷರ ಸಮಾಧಿಗಳ ಮೇಲೆ ಆಟವಾಡುತ್ತಿದ್ದೆವು. ಆನಂತರ ಅವರ ಸಮಾಧಿಗಳನ್ನು ಕಾಲೇಜು ರಸ್ತೆಗೆ ಸ್ಥಳಾಂತರಿಸಿ ರಾಜಾಸೀಟೀನ ಹೂದೋಟ ನಿರ್ಮಿಸಲಾಯಿತು.ಗದ್ದಿಗೆ ಎಂದರೆ ಮಡಿಕೇರಿಯನ್ನು ಆಳಿದ ರಾಜರ ಸಮಾಧಿಗಳಿರುವ ಸ್ಥಳ.ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.ಹಾಗೇ ಮಡಿಕೇರಿ ರಾಜರ ಅರಮನೆಯನ್ನು ಹಾಗೇ ಪ್ರವಾಸಿಗರ ವೀಕ್ಷಣೆಗಾಗಿ ಕಾಪಾಡುವ ಬದಲು ಸರ್ಕಾರಿ ಕಚೇರಿಗಳ ಕಟ್ಟಡವಾಗಿ ಬಳಸಿಕ್ಕೊಳ್ಳಲಾಗುತ್ತಿದೆ.ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಮಡಿಕೇರಿ ದಸರಾ ಸಂದರ್ಭದಲ್ಲಿ ಮುಸ್ಲಿಂ ಹುಡುಗನೊಬ್ಬನ ಕೊಲೆಯಾಗಿತ್ತು.ಆತನ ಅಂತ್ಯ ಸಂಸ್ಕಾರದ ಮೆರವಣಿಗೆಗಾಗಿ ಸಾವಿರಾರು ಮುಸ್ಲಿಮರು ಜಮಾಯಿಸಿದ್ದರು. ಆಗ ಮೆರವಣಿಗೆಗೆ ಪೊಲೀಸರು ಅನುಮತಿ ಕೊಡದ ಕಾರಣ ಪರಿಸ್ಥಿತಿ ಬಿಗಡಾಯಿಸುವಂತಿತ್ತು. ಈ ಸಂದರ್ಭದಲ್ಲಿ ಡಿವೈಎಸ್ ಪಿ ಆಗಿದ್ದ ಕೆಂಪೇಗೌಡರಿಗೆ ನಾನು,"ದಯವಿಟ್ಟು ಮೆರವಣಿಗೆಗೆ ಅನುಮತಿ ಕೊಡಿ.ಅನುಮತಿ ಕೊಡದಿದ್ದರೆ ಪರಿಸ್ಥಿತಿ ಹದಗೆಡುತ್ತದೆ.ನಾನೇ ಜವಾಬ್ಧಾರಿ ತೆಗೆದುಕೊಳ್ಳುತ್ತೇನೆ" ಎಂದು ಭರವಸೆ ನೀಡಿದ ನಂತರ ಮೆರವಣಿಗೆಗೆ ಅನುಮತಿ ದೊರೆಯಿತು.ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ.ಅವತ್ತು ಮುಸ್ಲಿಮರು ಮೆರೆದ ಸಹನೆ ಎಲ್ಲರಿಗೂ ಮಾದರಿಯಾಗಿತ್ತು. ಮಡಿಕೇರಿ ದಸರಾ ಹೇಗಿತ್ತೆಂದರೆ ನಾಲ್ಕು ಮಾರಿಯಮ್ಮ ದೇವಾಲಯಗಳು ಸೇರಿದಂತೆ ದಸರಾದಲ್ಲಿ ಮಂಟಪ ಕೊಂಡೊಯ್ಯುವ ದೇವಾಲಯಗಳಲ್ಲಿ ಬಹುತೇಕ ಹಿಂದುಳಿದ ಜಾತಿಗಳಿಗೆ ಸೇರಿದ ಯುವಕರು,ಮುಸ್ಲಿಮರು,ಕ್ರೈಸ್ತರು, ದಲಿತರು ಸೇರಿದಂತೆ ಎಲ್ಲ ಸಮುದಾಯಗಳ ಜನರು ಸೇರಿ ಮಂಟಪ ನಿರ್ಮಿಸುವ ಕಾರ್ಯದಲ್ಲಿ ಪಾಲ್ಗೊಳ್ಳೂತ್ತಿದ್ದರು.ಬಹುಮಾನ ಗೆದ್ದ ದೇವಾಲಯಗಳಿಗೆ ಬಹುಮಾನ ಬಂದರಂತೂ ಎಲ್ಲ ಜಾತಿ,ಧರ್ಮ ಮೀರಿ ಖುಷಿ ಪಡುತ್ತಿದ್ದ ಮನಸ್ಸುಗಳಿದ್ದವು.ಇಂಥ ದಸರಾಕ್ಕೆ ನಾನು ಮುಂಗಾರು ಪತ್ರಿಕೆಯಲ್ಲಿದ್ದಾಗ ೧೯೮೫ ರಲ್ಲಿ ಮಂಗಳೂರಿನ ಗೆಳೆಯರನ್ನು ಕರೆದುಕೊಂಡು ಬಂದಿದ್ದೆ. ನನಗೆ ಅಚ್ಚರಿ,ಆಘಾತ ಆಗುವಂತೆ ಅದೇ ಮೊದಲ ಬಾರಿಗೆ ದಸರಾ ದಿನವೇ "ಗೋ ಮಾಂಸ ಭಕ್ಷಕರಿಗೆ ಧಿಕ್ಕಾರ" ಎಂಬ ಘೋಷಣೆ ಕೂಗುತ್ತಿದ್ದ ಗುಂಪೊಂದು ಮೆರವಣಿಗೆ ನಡೆಸಿದ್ದನ್ನು ಕಂಡು ನನ್ನ ಮುಸ್ಲಿಂ ಸ್ನೇಹಿತರ ಎದುರು ನಾಚಿಗೆಯಾಗಿತ್ತು.ನಾವೆಲ್ಲರೂ ಸೇರಿ ದಸರಾ ಮಾಡುತ್ತೇವೆ ಎಂದು ಕರೆದುಕೊಂಡು ಬಂದಿದ್ದ ನನಗೆ ಅಂದು ಆದ ನೋವು ಅಷ್ಟಿಷ್ಟಲ್ಲ}
Powered By Blogger

ಬೆಂಬಲಿಗರು

renukacharya avarannu mantri maadiddu sariye?