ಬುಧವಾರ, ಡಿಸೆಂಬರ್ 31, 2014

ಭಾನುವಾರ, ಡಿಸೆಂಬರ್ 21, 2014

ಸಿದ್ದಲಿಂಗಯ್ಯ 
ನಾನು ೧೯೭೯ ರಲ್ಲಿ ನೋಡಿದ "ಇಕ್ಕರ್ಲಾ ವದೀರ್ಲಾ, ನನ್ನ ಮಕ್ಳ ಚರ್ಮ ಎಬ್ರಲಾ.." ಎಂಬ ಆಕ್ರೋಶ ಇದ್ದ ಸಿದ್ದಲಿಂಗಯ್ಯ ಅವರಿಗೂ, ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಿರುವ ಈಗಿನ ಸಿದ್ದಲಿಂಗಯ್ಯ ಸಾಕಷ್ಟು ಕಂದಕ ಇದ್ದರೂ ಅವರು ಶ್ರವಣಬೆಳಗೊಳದಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ನನಗಂತೂ ಖುಷಿ ಇದೆ. ಇದಕ್ಕಾಗಿ ಸಿದ್ದಲಿಂಗಯ್ಯ ಅವರನ್ನು ಅಭಿನಂದಿಸುತ್ತೇನೆ. ದಲಿತ ಸಾಹಿತಿಯೊಬ್ಬರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲೇಬೇಕೆಂದು ದೃಢ ನಿಶ್ಚಯ ಮಾಡಿ ಹಾಗೇ ನಡೆದುಕೊಂಡ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಕೂಡಾ ಅಭಿನಂದನೆಗೆ ಅರ್ಹರು. ಈ ಹಿಂದೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೊಬ್ಬರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂದು ಹಠತೊಟ್ಟು ಅದರಂತೆ ನಾ.ಡಿಸೋಜಾ ಅವರನ್ನು ಕನ್ನಡ ತೇರಿಗೆ ತಂದ ಗೌರವವೂ ಹಾಲಂಬಿ ಅವರಿಗೆ ಸಲ್ಲಬೇಕು. ಹಾಲಂಬಿ ಸಾದಾ ಸೀದಾ ಸರಳ ಮನುಷ್ಯ. ಈ ಹಿಂದೆ ಯಾವುದೇ ಅಧ್ಯಕ್ಷರ ಅವಧಿಯಲ್ಲಿ ಕೈಗೊಳ್ಳಲು ಸಾಧ್ಯವಾಗದ ನಿರ್ಧಾರ ಕೈಗೊಂಡಿರುವುದು  ಹಾಲಂಬಿ ಅವರ ಸಾಮಾಜಿಕ ಪ್ರಜ್ಞೆಯ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.ಆದರೆ ಈ ನಿರ್ಧಾರದಲ್ಲೂ ಅನಗತ್ಯ ಅಪಸ್ವರಗಳು ಕೇಳಿ ಬರತೊಡಗಿವೆ. ಸಿದ್ದಲಿಂಗಯ್ಯ ಅವರನ್ನು ದಲಿತ ಅನ್ನುವ ಕಾರಣಕ್ಕೆ ಆಯ್ಕೆ ಮಾಡಿರುವುದು ಸರಿಯಲ್ಲ, ಅವರನ್ನು ಪ್ರತಿಭೆ ಆಧಾರದ ಮೇಲೆ ಆಯ್ಕೆ ಮಾಡಬೇಕಿತ್ತು, ಹಾಗೆಂದು ಅವರು ಪ್ರತಿಭಾವಂತರಲ್ಲ ಎನ್ನುವ ವಾದ ತಮ್ಮದಲ್ಲ ಎಂಬ ಸಮರ್ಥನೆಯನ್ನೂ ಈ ಮಂದಿ ನೀಡುತ್ತಿದ್ದಾರೆ.ಇಂಥ ಅಪಸ್ವರ ಕೇಳಿ ಬರುತ್ತಿರುವುದು ಬಹುತೇಕ ಜ್ಞಾನಪೀಠ ಪ್ರಶಸ್ತಿಗಳನ್ನು, ಅನೇಕ ಸಮ್ಮೇಳನಗಳ ಅಧ್ಯಕ್ಷ ಸ್ಥಾನಗಳನ್ನು ಲಪಟಾಯಿಸಿರುವ ಸಮುದಾಯಕ್ಕೆ ಸೇರಿದವರಿಂದ.ಇಂಥವರ್ಯಾರಾದರೂ ಈ ಮೊದಲು ದೇವನೂರು ಅಥವಾ ಸಿದ್ದಲಿಂಗಯ್ಯ ಅವರಿಗೆ ಸಮ್ಮೇಳನ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದ್ದರೇ? ಕಸಾಪಕ್ಕೆ ಶತಮಾನ ತುಂಬುವವರೆಗೆ,  ೮೦ ಕ್ಕೂ ಹೆಚ್ಚು ಸಾಹಿತ್ಯ ಸಮ್ಮೇಳನಗಳಾಗುವವರೆಗೆ ಯಾಕೆ ಈ ಮಂದಿ ಬಾಯಿ ಮುಚ್ಚಿಕೊಂಡಿದ್ದರು? ಸ್ವತಃ ಸಿದ್ದಲಿಂಗಯ್ಯ ಅವರೇ ತಮ್ಮನ್ನು ದಲಿತ ಕವಿ ಎಂದು ಕರೆಯಬೇಡಿ, ಕವಿ ಎಂದು ಗುರುತಿಸಿದರೆ ಸಾಕು ಎಂದು ಬಹಳ ಹಿಂದೆಯೇ ಹೇಳಿದ್ದಾರೆ. ಅದು ಸರಿ ಕೂಡಾ. ಯಾರನ್ನು ತಾನೇ ಒಕ್ಕಲಿಗ ಕವಿ, ಲಿಂಗಾಯತ ಕವಿ,ಬ್ರಾಹ್ಮಣ ಕವಿ, ಬೆಸ್ತ ಕವಿ ಎಂದು ಕರೆದಿದ್ದಾರೆ? ಆದರೆ ಸಿದ್ದಲಿಂಗಯ್ಯ ಅವರ ಜಾತಿ ಗುರುತಿಸಿದ್ದರಲ್ಲಿ ತಪ್ಪಾದರೂ ಏನಿದೆ? ಹಾಗಾದರೆ ಜಾತಿ ಅನ್ನೋದು ಇಲ್ವೇ ಇಲ್ವಾ? ಜಾತಿ ಇರಬಾರದು ಎನ್ನುವುದು ಸರಿ. ಆದರೆ ಅದಕ್ಕೆ ತಕ್ಕಂತೆ ಜಾತ್ಯತೀತ ವಾತಾವರಣ ನಿರ್ಮಾಣವಾಗಿದೆಯೇ? ಈಗ ಇದನ್ನು ಹೇಳುತ್ತಿರುವವರಾದರೂ ಯಾರು? ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿದವರ ವಂಶಸ್ಥರೇ ಈ ಮಾತನ್ನು ಹೇಳುತ್ತಿದ್ದಾರೆ. ಜಾತಿ ಆಧಾರಿತ ಸಮಾಜ ಸೃಷ್ಟಿ ಮಾಡಿ ಅದರ ಮೇಲು ಸ್ತರದ ಎಲ್ಲ ಹುದ್ದೆಗಳನ್ನು ಕಬಳಿಸುತ್ತಿದ್ದವರು ಈಗ ಮೀಸಲಾತಿಯಿಂದ ಬುಡಕ್ಕೆ ಬಿಸಿ ಕಾಯ್ದ ನಂತರ "ಜಾತ್ಯತೀತ" ಮಾತು ಶುರು ಮಾಡಿದ್ದಾರೆ." ಜಾತ್ಯತೀತ" ಮಾತು ಅಂದರೆ ಮಾತು ಮಾತ್ರವೇ ಹೊರತು ಅವರ ಮನೋಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ? ಮಾತು ಶುರು ಮಾಡಿದರೆ ಪ್ರತಿಭೆ, ಪ್ರತಿಭೆ ಅಂತ ಬಡಬಡಿಸುತ್ತಾರಲ್ಲಾ? ಕನ್ನಡದ ಮಹೋನ್ನತ ಸಾಹಿತಿ, ಈ ನೆಲದ ಸಾಕ್ಷೀಪ್ರಜ್ಞೆಯಾಗಿದ್ದ ಲಂಕೇಶ್ ಅವರಿಗೆ ಯಾಕೆ ಜ್ಞಾನಪೀಬರಲಿಲ್ಲ? ಕನ್ನಡದಿಂದ ಜ್ಞಾನಪೀಠ ಪ್ರಶಸ್ತಿ ಪಡೆದವರೆಲ್ಲ ಈ ಪ್ರಶಸ್ತಿಗೆ ಅರ್ಹರಾಗಿದ್ದರೇ?
ನನಗೂ ಸಿದ್ದಲಿಂಗಯ್ಯ ಅವರಿಗೆ ಸಂಬಂಧಿಸಿದಂತೆ ಕೆಲವು ತಕರಾರುಗಳಿವೆ. ಅದು ಈ ಮಹಾನ್ "ಜಾತ್ಯತೀತ" ವ್ಯಕ್ತಿಗಳ ಸ್ವಾರ್ಥ ಚಿಂತನೆ ಆಧರಿಸಿದ್ದಲ್ಲ. "ಗುಡಿಸಲುಗಳು ಗುಡುಗುತ್ತಿವೆ, ಬಂಗಲೆಗಳು ನಡುಗುತ್ತಿವೆ.." ಎಂದು ಸಾತ್ವಿಕ ಸಿಟ್ಟು ತೋರಿದ್ದ ಸಿದ್ದಲಿಂಗಯ್ಯ ಈ ಹಿಂದೆ ರಾಮಕೃಷ್ಣ ಹೆಗಡೆ ಮು.ಮಂ. ಆಗಿದ್ದಾಗ ಮೊದಲ ಸಲ ಎಂ.ಎಲ್.ಸಿ. ಆದಾಗ ನನಗೇನೂ ಆಕ್ಷೇಪ ಇರಲಿಲ್ಲ. ಆನಂತರ ಎರಡನೇ ಅವಧಿಗೂ ಇದೇ ಸ್ಥಾನವನ್ನು ಪಡೆದು ಮುಂದುವರಿದ ಬಗ್ಗೆ ನನಗೆ ಅಸಮಾಧಾನವಿತ್ತು. ಅದನ್ನು ನಾನು ಆಗಿದ್ದ ಲಂಕೇಶ್ ಪತ್ರಿಕೆಯಲ್ಲೇ ಬರೆದಿದ್ದೆ ಕೂಡಾ.ಅಷ್ಟಕ್ಕೂ ಸುಮ್ಮನಾಗದೆ ಕುಮಾರಸ್ವಾಮಿ ಮು.ಮಂ. ಆದಾಗ, ಯಡಿಯೂರಪ್ಪ ಮು.ಮಂ. ಆದಾಗ ಯಾವ್ಯಾವುದೋ ಪ್ರಾಧಿಕಾರದ ಅಧ್ಯಕ್ಷ ಸ್ಥಾನಗಳಲ್ಲಿ ಮುಂದುವರಿಯಲು ಅವರ ಊರು ಕೇರಿ ಆತ್ಮಕತೆಯನ್ನು ಈ ಜನವಿರೊಧಿ ನಾಯಕರಿಗೆ ಅರ್ಪಿಸಿದ್ದರ ಬಗ್ಗೆ ನನಗೆ ತುಂಬ ಸಿಟ್ಟಿದೆ.ಒಂದು ತಲೆಮಾರಿನ ಮೇಲೆ ಅಪಾರ ಪ್ರಭಾವ ಬೀರಿದ್ದ ಬರಹಗಾರನೊಬ್ಬ ಹೀಗಾಗಬಾರದಿತ್ತು ಅನ್ನುವ ನೋವು ಮತ್ತು ಸಿಟ್ಟು ಅದು. ಇಷ್ಟೆಲ್ಲದರ ನಡುವೆಯೂ ಅವರು ಮುಖವಾಡ ಹಾಕಿಕೊಂಡು ಬದುಕುತ್ತಿಲ್ಲ.ಅವರೊಳಗೆ ಇನ್ನೂ ಅಪ್ಪಟ ಮನುಷ್ಯ ಇನ್ನೂ ಉಳಿದಿದ್ದಾನೆ. ಅವರ ಹಾಸ್ಯ ಪ್ರಜ್ಞೆಗೆ ಕುಂದುಂಟಾಗಿಲ್ಲ. ಎಲ್ಲ ರಾಜಿಗಳ ನಡುವೆಯೂ ತಮ್ಮ ವಿಚಾರಧಾರೆಗಳನ್ನು ಮರೆತಿಲ್ಲ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ. ಇವತ್ತಿಗೂ ಸಿದ್ದಲಿಂಗಯ್ಯ ಅವರ ಜತೆ ಯಾವುದೇ ಸಾಮಾನ್ಯ ಮನುಷ್ಯನೊಬ್ಬ ಇವತ್ತಿಗೂ ಸಂಭಾಷಿಸುವುದು ಸಾಧ್ಯವಿದೆ.ಆದರೆ ಅವರ ಜತೆಯಲ್ಲೇ ಬೆಳೆದ ಎಷ್ಟೋ ಬರಹಗಾರರಿಗೆ ಈ ಸೌಜನ್ಯವೂ ಗೊತ್ತಿಲ್ಲ. ಈಗ ಪುಂಡಲೀಕ ಹಾಲಂಬಿ ಅವರು ಈ ನಿರ್ಧಾರ ಕೈಗೊಳ್ಳದೇ ಹೋಗಿದ್ದರೆ ಇನ್ನೆರಡು ಶತಮಾನವಾದರೂ ಈ ಗೌರವ ದಲಿತ ಸಮುದಾಯಕ್ಕೆ ಸೇರಿದ ಪ್ರತಿಭಾವಂತ ಬರಹಗಾರನೊಬ್ಬನಿಗೆ ಸಿಗುವುದು ಕಷ್ಟವಿತ್ತು. ಪ್ರತಿಭೆ ಅಂದರೆ ಮಾನದಂಡ ಏನು? ಒಂದೇ ಜಾತಿಗೆ ಸೇರಿದ ಆಯ್ಕೆಯೇ? ಪ್ರಭಾವಿಗಳು ಮತ್ತು ಪ್ರಬಲರನ್ನು ಮಾತ್ರ ಓಲೈಸುವ ಆಯ್ಕೆಯೇ?      

ಶನಿವಾರ, ಡಿಸೆಂಬರ್ 6, 2014

Powered By Blogger

ಬೆಂಬಲಿಗರು

renukacharya avarannu mantri maadiddu sariye?