ಭಾನುವಾರ, ನವೆಂಬರ್ 22, 2009

ರಾಜ್ಯಪಾಲರ ಕ್ರಿಯಾಶೀಲತೆ

ರಾಜ್ಯಪಾಲರೆ ಹುದ್ದೆ ಒಂದು ಬಿಳಿಯಾನೆ,ಅದರ ಅಗತ್ಯವೇ ಇಲ್ಲಾ,ಇಂಗ್ಲಿಷರು ಹಾಕಿಕೊಟ್ಟ ಸಂಪ್ರದಾಯವನ್ನು ಮುಂದುವರಿಸಬೇಕಿಲ್ಲ,ಇದನ್ನು ರದ್ದುಪಡಿಸಿ ಅಂತ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಈ ಹಿಂದೆ ಅದೆಷ್ಟೋ ಸಲ ಒತ್ತಾಯಿಸಿ ಈಗ ಸುಮ್ಮನಾಗಿಬಿಟ್ಟಿದ್ದಾರೆ.ರಾಷ್ಟ್ರಪತಿ ಹುದ್ದೆ ಬಿಟ್ಟರೆ ರಾಜ್ಯಪಾಲರ ಹುದ್ದೆಯೂ ಕೇವಲ ರಬ್ಬರ್ ಸ್ಟಾಂಪ್ ಎನ್ನುವ ಕಾಲವೂ ಇತ್ತು.
ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು,ಸರ್ಕಾರ ಕಳಿಸಿದ ಮಸೂದೆಗಳಿಗೆ ಸಹಿ ಹಾಕುವುದು ಬಿಟ್ಟರೆ ಬೇರೇನೂ ಕೆಲಸ ಇಲ್ಲಾ ಎನ್ನುವವರೂ ಇದ್ದಾರೆ.ಕರ್ನಾಟಕದಲ್ಲಿ ದೀರ್ಘಾವಧಿ ರಾಜ್ಯಪಾಲ ಖುರ್ಷೀದ್ ಅಲಂ ಖಾನ್ ಇಂತಹ ಆರೋಪಗಳನ್ನು ಸಮರ್ಥಿಸುವಂತೆ ಸುಮ್ಮನೆ ಇದ್ದು ಹೋಗಿದ್ದ್ದಾರೆ.ಸುಮಾರು ಒಂಬತ್ತು ವರ್ಷ ಕರ್ನಾಟಕದಲ್ಲಿ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದರೂ ಕನ್ನಡದಲ್ಲಿ ಮಾತನಾಡುವುದು ಹೋಗಲಿ ಒಂದೇ ಒಂದು ಅಕ್ಷರವನ್ನೂ ಕಲಿಯದೇ ಕರ್ನಾಟಕದಲ್ಲಿ ಇದ್ದೂ ಇಲ್ಲದಂತೆ ತಮ್ಮ ಹುಟ್ಟೂರಿಗೆ ವಾಪಸಾಗಿದ್ದಾರೆ. ಖುರ್ಷೀದ್ ರಾಜ್ಯಪಾಲರಾಗಿ ಇದ್ದಾಗಲಂತೂ ಕನ್ನಡಿಗರು ರಾಜ್ಯಪಾಲರ ಹುದ್ದೆ ಎಂದರೆ ಮುಖ್ಯಮಂತ್ರಿ ಮತ್ತು ಮಂತ್ರಿಗಳಿಗೆ ಪ್ರಮಾಣ ವಚನ ಬೋಧಿಸುವ ಯಂತ್ರ ಎಂದೇ ತಪ್ಪಾಗಿ ತಿಳಿದಿರುವ ಸಾಧ್ಯತೆ ಇದೆ. ಇಂಗ್ಲಿಷ್ನಲ್ಲಿ ಬರೆದು ಕೊಟ್ಟ ಕನ್ನಡ ವಾಕ್ಯವನ್ನೂ ಸರಿಯಾಗಿ ಓದುವ ಅಭ್ಯಾಸ ಮಾಡಿಕೊಳ್ಳದೆ ಪ್ರಮಾಣ ವಚನ ಬೋಧನೆ ಸಂದರ್ಭದಲ್ಲಿ,"ಎಂಬಹೆ -ಸರಿನವ -ನಾದನಾ -ನು " ಎಂದು ಓದುತ್ತಾ ನಗೆಪಾಟಲಿಗೆ ಈಡಾಗುತ್ತಿದ್ದರು.
ರಾಜ್ಯದ ಮೊಟ್ಟ ಮೊದಲ ಮಹಿಳಾ ರಾಜ್ಯಪಾಲರಾದ ರಮಾದೇವಿ ಅವರು ತೆಲುಗಿನವರಾದ ಕಾರಣ ಬಹು ಪಾಲು ಒಂದೇ ರೀತಿಯ ಲಿಪಿ ಇದ್ದುದರಿಂದ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡಿಗರಿಗೆ ಖುಷಿ ಉಂಟು ಮಾಡಿದ್ದರು. ಆದರೆ ರಾಜ್ಯಪಾಲರಿಗಿಂತ ಜನ ಪ್ರತಿನಿಧಿಗಳಿಗೆ ಹೆಚ್ಚಿನ ಅಧಿಕಾರ ಎನ್ನುವ ಸಾಂವಿಧಾನಿಕ ಮಾತಿಗೆ ಮನ್ನಣೆ ನೀಡುವಂತೆ ಕೇವಲ ಚುರುಕಾಗಿ ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಲ್ಲುತ್ತಿದ್ದರೆ ಹೊರತು ರಾಜ್ಯಪಾಲರಾಗಿ ಗಮನ ಸೆಳೆದದ್ದು ಅಷ್ಟರಲ್ಲೇ ಇದೆ. ನಿವೃತ್ತ   IAS ಅಧಿಕಾರಿ ಚತುರ್ವೇದಿ ಅವರಂತೂ ಮಳೆ ನೀರು ಕೊಯ್ಲಿಗೆ ಮಾರು ಹೋಗಿ ರಾಜಭವನದಲ್ಲಿ ಅದನ್ನು ಕಾರ್ಯ ರೂಪಕ್ಕೆ ತಂದರು.ತಮ್ಮ ಅಧಿಕಾರಾವಧಿಯಲ್ಲಿ ತುಂಬಾ ಸಭ್ಯರಾಗಿ ಸೇವೆ ಸಲ್ಲಿಸಿದ್ದ ಅವರು ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ಹ್ ಅವರಿಗೆ  ಕುಮಾರಸ್ವಾಮಿ ಕೈ ಕೊಟ್ಟ ನಂತರ ಬಹುಮತ ಸಾಬೀತಿಗೆ ಹೆಚ್ಚಿನ ಕಾಲಾವಕಾಶ ನೀಡಿ ತಮ್ಮ ನೇಮಕ ಮಾಡಿದ್ದ ಕೇಂದ್ರದ ಬಿಜೆಪಿ ನಾಯಕರಿಂದಲೇ ಟೀಕೆಗೆ ಒಳಗಾಗಿದ್ದರು.
ಕಳೆದ ಎಂಟು ಹತ್ತು ವರ್ಷಗಳನ್ನು ಬಿಟ್ಟರೆ ಹಿಂದಿನ ಬಹುತೇಕ ರಾಜ್ಯಪಾಲರು ತಮ್ಮನ್ನು ನೇಮಕ ಮಾಡಿದ ಆಡಳಿತರೂಢ ಪಕ್ಷದ ಸೇವಕರಂತೆ ಕಾರ್ಯ ನಿರ್ವಹಿಸುತ್ತಿದ್ದರು.ಕೇಂದ್ರ ಸರ್ಕಾರ ಬಯಸಿದರೆ ರಾಜ್ಯ ಸರ್ಕಾರದ ವಜಾಕ್ಕೆ ಶಿಫಾರಸು ಮಾಡುವ ಅಡಿಯಾಳಿನಂತೆ ಸೊಂಟ ಬಗ್ಗಿಸಿ ನಿಲ್ಲುತ್ತಿದ್ದರು. ಹೀಗಾಗಿ ಎಸ್ಟೋ ಸಲ ರಾಜ್ಯಪಾಲರ ಕರ್ತವ್ಯ ಎಂದರೆ ಸರ್ಕಾರ ವಜಾಕ್ಕೆ ಶಿಫಾರಸು ಮಾಡುವುದಷ್ಟೇ ಎಂದೂ ಭಾವಿಸಿದವರಿದ್ದಾರೆ.
ಎಚ್.ಆರ್.ಭಾರದ್ವಾಜ್ ಉಳಿದವರಿಗಿಂತ ಭಿನ್ನರಾಗಿ ಕಾಣುತ್ತಿದ್ದಾರೆ.ಕೇಂದ್ರದಲ್ಲಿ ಮಂತ್ರಿಯಾಗಿದ್ದಾಗ ನಿಷ್ಪ್ರಯೋಜಕರಂತೆ ಕಾಣುತ್ತಿದ್ದ ಭಾರದ್ವಾಜ್ ಕರ್ನಾಟಕದ ರಾಜ್ಯಪಾಲರಾದ ನಂತರ ಕ್ರಿಯಾಶೀಲತೆ ಮೆರೆಯುವ ಹಾದಿಯಲ್ಲಿ ಸಾಗುವಂತೆ ಕಾಣುತ್ತಿದ್ದಾರೆ. ಕೇವಲ ಸಹಿ ಹಾಕುವ ಅಥವಾ ಸರ್ಕಾರಕ್ಕೆ ಪ್ರಮಾಣ ವಚನ ಬೋಧಿಸುವುದಷ್ಟೇ  ತನ್ನ ಕೆಲಸವಲ್ಲ ಎಂದು ಸಾಬೀತುಪಡಿಸುತ್ತಿದ್ದಾರೆ.ರಾಜ್ಯಪಾಲರ ಬಳಿ ಅಂಕುಶವೂ ಇದೆ,ಚಾಟಿಯೂ ಇದೆ ಎಂಬುದನ್ನು ತೋರಿಸುತ್ತಿದ್ದಾರೆ.ಚರ್ಚುಗಳ ಮೇಲಿನ ದಾಳಿ ,ಪಬ್ಬುಗಳಿಗೆ ಯುವತಿಯರು ಹೋದಾಗ ಶ್ರೀರಾಮಸೇನೆ ಎಂಬ ಹೆಸರಿನ  ವಾನರ ಸೇನೆ ಹಲ್ಲೆ ನಡೆಸಿದಾಗ ಭಾರದ್ವಾಜ್ "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಎಚ್ಚರಿಕೆ ನೀಡಿದರು,ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಚುರುಕಾಗಿ ನಡೆಸುವಂತೆ ಗುಡುಗಿದರು.ಗಣಿ ದಣಿಗಳು ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಾಗ,"ನಾನೇನೂ ಸುಮ್ಮನೆ ಕುಳಿತಿಲ್ಲ,ಅಗತ್ಯ ಕಂಡು ಬಂದರೆ ಸಾಂವಿಧಾನಿಕ ಅಧಿಕಾರ ಚಲಾಯಿಸುವುದಾಗಿಯೂ ಬಿಸಿ ಮುಟ್ಟಿಸಿದರು.
ಭಾರದ್ವಾಜ್ ವಿಭಿನ್ನ ಮಾದರಿಯ ರಾಜ್ಯಪಾಲರಂತೆ ಕಾಣುತ್ತಿದ್ದಾರೆ.ಪ್ರಜಾಸತ್ತೆಯ ಆಶಯಗಳಿಗೆ ಅಡ್ಡಿ ಉಂಟು ಮಾಡದೆ ಸರ್ಕಾರ ಕುರುಡು ಗೂಳಿಯಂತೆ ಮುನ್ನುಗ್ಗದೆ ನಿಜಕ್ಕೂ ಜನಪರ ಸರ್ಕಾರವಾಗಲು ಭಾರದ್ವಾಜ್ ಪ್ರೇರಣೆ ನೀಡಲಿ.ಶೇಷನ್,ಲಿಂಗ್ದೊಗಳು ಚುನಾವಣಾ ಆಯೋಗದ ಅಸ್ತಿತ್ವ ಪ್ರದರ್ಶಿಸಿ ಕ್ರಿಯಾಶೀಲರಾದಂತೆ,ರಾಜ್ಯಪಾಲರ ಹುದ್ದೆಗೂ ಘನತೆ ,ಗೌರವ ತಂದು ಕೊಡಲಿ. 

1 ಕಾಮೆಂಟ್‌:

  1. rajyapalaa krisheelate lekhandalli rameshwar takur bagge prsatapa agilla. avra maga mattu aliya na mele brastachara aropa keli banditu. kannada pathrika sampadakara ella yeddi bajne alli todgikondidare. teeke tippani avrannu echharissili.
    mahanthesh.g.

    ಪ್ರತ್ಯುತ್ತರಅಳಿಸಿ

Powered By Blogger

ಬೆಂಬಲಿಗರು

renukacharya avarannu mantri maadiddu sariye?